ಒಂದುವೇಳೆ ಡಿಕೆಶಿ ಸಿಎಂ ಆದ್ರೆ ನನಗೆ ಸಚಿವ ಸ್ಥಾನ ಬೇಡವೇ ಬೇಡ ಎಂದ ರಾಜಣ್ಣ

ತುಮಕೂರು : ನಾನು 2028ರ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ, ಎಂದು ಮಾಜಿ ಸಚಿವ ಕೆ.ಎನ್‌.ರಾಜಣ್ಣ ಅವರು ಮಹತ್ವದ ನಿರ್ಧಾರವೊಂದನ್ನು ಘೋಷಿಸಿದ್ದಾರೆ.

ಡಿಕೆ ಸಿಎಂ ಆದ್ರೆ ನನಗೆ ಸಚಿವ ಸ್ಥಾನ ಬೇಡ..!?
ನಗರದಲ್ಲಿ ನಡೆದ ಸಹಕಾರ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, ನಾನು ಮೊದಲೇ ಹೇಳಿದ್ದೇನೆ, ಶಿವಕುಮಾರ್ ಸಿಎಂ ಆದರೆ ಅವರ ಸಂಪುಟದಲ್ಲಿ ಸಚಿವ ಆಗುವುದಿಲ್ಲ. ಮತ್ತೆ ಅದನ್ನೇ ಹೇಳ್ತೀನಿ, ಡಿಕೆಶಿ ಸಂಪುಟದಲ್ಲಿ ನನಗೆ ಸ್ಥಾನ ಬೇಡವೇ ಬೇಡ. ನನಗೆ ಸಾಕು, ಇನ್ನೊಬ್ಬರಿಗೆ ಅವಕಾಶ ಕೊಡಲಿ ಎಂದು ಪುನರುಚ್ಚರಿಸಿದರು.

ನಾನು ಯಾವತ್ತೂ ಅಧಿಕಾರ ಹುಡುಕಿ ಹೋದವನಲ್ಲ. ಅಧಿಕಾರ ಬೇಕು ಅಂತಾ ಸಂಪೂರ್ಣ ಅಪೇಕ್ಷೆ ಪಡೋನು ಅಲ್ಲ. ಅಧಿಕಾರ ಬಂದರೆ ಏನೆಲ್ಲಾ ಮಾಡಬಹುದು ಎಂದು ತೋರಿಸಿ ಕೊಟ್ಟಿದ್ದೇನೆ. ನಾನು ಸಚಿವನಾಗಿದ್ದಾಗ ಜಾರಿ ಮಾಡಿದ್ದ ತಿದ್ದುಪಡಿ ಜಾರಿಯಾದರೆ ಸಹಕಾರಿ ಕ್ಷೇತ್ರದಲ್ಲಿ ಕ್ರಾಂತಿಯಾಗುತ್ತದೆ. ಸೊಸೈಟಿಗಳಲ್ಲೂ ನಾನು ಮೀಸಲಾತಿ ವ್ಯವಸ್ಥೆ ಜಾರಿ ಮಾಡಿದ್ದೇನೆ ಎಂದು ತಾವು ತಂದ ಕ್ರಾಂತಿಕಾರಿ ಬದಲಾವಣೆಗಳನ್ನು ಸ್ಮರಿಸಿದರು.

ಇನ್ನು ಸಿಎಂ ಮತ್ತು ಡಿಸಿಎಂ ದುಬಾರಿ ವಾಚ್‌ಗಳ ಕುರಿತು ವಿರೋಧ ಪಕ್ಷದ ಟೀಕೆಯ ಬಗ್ಗೆ ಮಾತನಾಡಿದ ರಾಜಣ್ಣ, ವಿರೋಧ ಪಕ್ಷದವರಿಗೆ ವಿರೋಧ ಮಾಡೋಕೆ ಬೇರೆ ವಿಚಾರ ಇಲ್ಲ. ವಾಚ್ ಬಗ್ಗೆ ಊಟಕ್ಕೆ ಹೋದರೂ ಆರೋಪ ಮಾಡುತ್ತಾರೆ. ಜ್ವಲಂತ ಸಮಸ್ಯೆಗಳ ಬಗ್ಗೆ ಗಮನ ಹರಿಸಲಿ ಅಂತಾ ಮನವಿ ಮಾಡುತ್ತೇನೆ ಎಂದು ಸಲಹೆ ನೀಡಿದರು.

ಇದನ್ನೂ ಓದಿ : ‘ಕೊಟ್ಟ ಮಾತು’… ಡಿಕೆ ಬ್ರದರ್ಸ್‌ಗೆ ಸಿಎಂ ಸಿದ್ದರಾಮಯ್ಯ ನೇರ ಟಾಂಗ್

ಇದೇ ವೇಳೆ, ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಡಿಕೆ ಬ್ರದರ್ಸ್‌ಗೆ ನೋಟಿಸ್ ಬಂದಿರುವ ಬಗ್ಗೆ ಕೇಳಿದಾಗ, ಆ ವಿಚಾರ ನನಗೂ ಗೊತ್ತಾಗಿದೆ. ಆದರೆ ಏನಕ್ಕೆ ಕೊಟ್ಟಿದ್ದಾರೆ ಅನ್ನೋ ಮಾಹಿತಿ ನನಗೂ ಇಲ್ಲ. ಅವರದ್ದು 128 ಕೇಸ್‌ಗಳು ಇದ್ದಾವೆ. ಅದರಲ್ಲಿ ಯಾವುದುಕ್ಕೆ ಕೊಟ್ಟಿದ್ದಾರೆ ಯಾರಿಗೆ ಗೊತ್ತು ಎಂದು ಪ್ರತಿಕ್ರಿಯಿಸಿದರು.

ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಕೊಲೆಯ ಕುರಿತು ಮಾತನಾಡಿದ ಅವರು, ಹಿಂಸೆ ಯಾವಾಗಲೂ ಕಠಿಣವಾದುದು. ಇಂತಹ ದಾಳಿಗಳು ಯಾವುದೇ ಪಕ್ಷದ ಮೇಲೆ ನಡೆಯಬಾರದು. ಇಂತಹ ಕೃತ್ಯಗಳು ಒಪ್ಪುವಂತದಲ್ಲ, ಎಂದು ಖಂಡಿಸಿದರು. ಇನ್ನು ಇಂಡಿಗೋ ವಿಮಾನ ಹಾರಾಟ ಸ್ಥಗಿತ ವಿಚಾರಕ್ಕೆ ಪ್ರತಿಕ್ರಿಯಿಸಿದ ರಾಜಣ್ಣ, ಇಂಡಿಗೋ ವಿಚಾರವಾಗಿ ಮೋದಿಯವರನ್ನು ಮಾತ್ರ ಬ್ಲೇಮ್ ಮಾಡಬಾರದು. ಬೇರೆ ಆಡಳಿತ ವರ್ಗದವರನ್ನು ಮಾಡಬೇಕು. 8 ಗಂಟೆ ಕೆಲಸದ ಬದಲು 12 ಗಂಟೆ ಕೆಲಸ ಮಾಡಿಸಿದ್ದಾರೆ. 200 ಜನ ಪೈಲೆಟ್ಸ್ ಕೊರತೆ ಇದೆ. ಹಾಗಾಗಿ ಸಮಸ್ಯೆ ಉಂಟಾಗಿದೆ ಎಂದರು.

Leave a Reply

Your email address will not be published. Required fields are marked *