ನಾನೇ 5 ವರ್ಷ ಸಿಎಂ ಆಗಿರ್ತೀನಿ, ಬಜೆಟ್‌ ಕೂಡ ನಾನೇ ಮಂಡುಸ್ತೀನಿ : ಸಿದ್ದರಾಮಯ್ಯ ಸ್ಪಷ್ಟನೆ

ಮೈಸೂರು: ಐದು ವರ್ಷವೂ ನಾನೇ ಸಿಎಂ ಆಗಿ ಮುಂದುವರಿಯುತ್ತೇನೆ. ನಾನೇ ಇನ್ನೂ ಎರಡು ಬಜೆಟ್ ಅನ್ನ ಕೂಡ ಮಂಡಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ನಗರದಲ್ಲಿ ಅಧಿಕಾರ ಹಂಚಿಕೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಮಗೆ ಯಾಕೆ ಅನುಮಾನ? ಯಾಕೆ ಮತ್ತೆ ಮತ್ತೆ ಅದನ್ನ ಕೇಳುತ್ತೀರಾ? ಹೈಕಮಾಂಡ್ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಿದ್ಯಾ? ನಾಯಕತ್ವ ಬದಲಾವಣೆ ಸಂಪುಟ ಪುನಾರಚನೆ ಎಲ್ಲದನ್ನ ತೀರ್ಮಾನ ಮಾಡುವುದು ಹೈಕಮಾಂಡ್.

ಈ ಬಗ್ಗೆ ಹೈಕಮಾಂಡ್ ಇಲ್ಲಿಯವರೆಗೆ ಏನಾದರು ಮಾತನಾಡಿದ್ಯಾ? ಇಲ್ಲ ತಾನೇ, ಹಾಗಾದ್ರೆ ಮತ್ತೆ ಯಾಕೆ ಆ ಪ್ರಶ್ನೆ ಕೇಳ್ತೀರ. ಹೈಕಮಾಂಡ್ ಹೇಳುವುದನ್ನ ನಾನೂ ಕೇಳ್ಬೇಕು ಡಿ.ಕೆ.ಶಿವಕುಮಾರ್ ಅವರೂ ಕೇಳ್ಬೇಕು.

ದೆಹಲಿಗೆ ಹೋಗಿರುವ ಚೆಲುವರಾಯಸ್ವಾಮಿ ಜೊತೆ ನಾನೇ ಮಾತಾಡಿದ್ದೇನೆ. ಇಲಾಖೆ ಕೆಲಸದ ಹಿನ್ನೆಲೆಯಲ್ಲಿ ಹೋಗಿದ್ದೇನೆ ಎಂದು ಚೆಲುವರಾಯಸ್ವಾಮಿ ಹೇಳಿದ್ದಾರೆ. ಶಾಸಕರು, ಸಚಿವರು ದೆಹಲಿಗೆ ಹೋಗಬಾರದಾ?

ಶಾಸಕರು ದೆಹಲಿಗೆ ಹೋಗಿರುವ ಬಗ್ಗೆ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಮತ್ತೆ ನಾನು ಯಾಕೆ ಈ ಬಗ್ಗೆ ವಿವರಣೆ ಕೊಡಲಿ. ನಾಳೆ ಮಲ್ಲಿಕಾರ್ಜುನ ಖರ್ಗೆ ಬೆಂಗಳೂರಿಗೆ ಬರ್ತಾರೆ. ಅವರನ್ನ ಬೆಂಗಳೂರಿನಲ್ಲಿ ಭೇಟಿ ಮಾಡ್ತೀನಿ ಎಂದರು.

ಇನ್ನು ಕೊಟ್ಟ ಮಾತಿನಂತೆ ಸಿದ್ದರಾಮಯ್ಯ ನಡೆದುಕೊಳ್ಳುತ್ತಾರೆ ಎಂಬ ಡಿ.ಕೆ ಸುರೇಶ್ ಹೇಳಿಕೆ ವಿಚಾರವಾಗಿ ಮಾತನಾಡಿ, ಹೌದು.. ನಾನು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇನೆ. ಕೊಟ್ಟ ಮಾತಿನಂತೆ ಗ್ಯಾರಂಟಿ ಜಾರಿ ಮಾಡಿದ್ದೇನೆ. ಜನರಿಗೆ ಕೊಟ್ಟ ಆಶ್ವಾಸನೆ ಈಡೇರಿಸಿದ್ದೇನೆ ಎಂದು ಡಿಕೆ ಪರೋಕ್ಷವಾಗಿ ಟಾಂಗ್ ನೀಡಿದ್ರು.

Leave a Reply

Your email address will not be published. Required fields are marked *