ಕೋಲಾರ : ಸುಪ್ರೀಂಕೋರ್ಟ್ ಆದೇಶದಂತೆ ಕೋಲಾರ ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆ ಇಂದು ನಡೆಯಲಿದೆ. ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡ ಮತ್ತು ಬಿಜೆಪಿ ಅಭ್ಯರ್ಥಿ ಕೆ.ಎಸ್.ಮಂಜುನಾಥ್ ಗೌಡ ನಡವಿನ ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿರುವ ಮಾಲೂರು ವಿಧಾನಸಭಾ ಕ್ಷೇತ್ರದ ಮತ ಮರಎಣಿಕೆ ಮುಕ್ತಾಯಗೊಂಡಿದೆ.
ಆದರೆ ಮರು ಎಣಿಕೆ ಮುಗಿದರೂ ಇಂದು ಫಲಿತಾಂಶ ಮಾತ್ರ ಪ್ರಕಟವಾಗುವುದಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ.
ಒಟ್ಟು 18 ಸುತ್ತು ಮರುಮತ ಎಣಿಕೆ ಕಾರ್ಯ ನಡೆದಿದೆ. ಮರು ಎಣಿಕೆಯ ಫಲಿತಾಂಶವನ್ನು ಚುನಾವಣಾ ಆಯೋಗ ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಿದೆ. ಅದಾದ ನಂತರ ನ್ಯಾಯಾಲಯ ಈ ಕುರಿತು ತನ್ನ ತೀರ್ಪು ಪ್ರಕಟಿಸಲಿದೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಇವಿಎಂ ಮತಗಳ ಮರುಎಣಿಕೆ ನಡೆಯುತ್ತಿದ್ದು, ಎಲ್ಲರ ಕುತೂಹಲಕ್ಕೆ ಈ ಕ್ಷೇತ್ರ ಕಾರಣವಾಗಿದೆ. ಇತ್ತೀಚಿಗಷ್ಟೇ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಚುನಾವಣಾ ಅಕ್ರಮದ ಬಗ್ಗೆ ಟೀಕಿಸಿ ಮತಗಳವು ಮಾಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದರು.
ಈಗ ಬಿಜೆಪಿ ಅಭ್ಯರ್ಥಿ ಗೆದ್ದರೆ ಇದರ ಪರಿಣಾಮ ರಾಜ್ಯ ಕಾಂಗ್ರೆಸ್ ಮೇಲೆ ಬೀರಲಿದ್ದು, ರಾಹುಲ್ ಗಾಂಧಿ ಆರೋಪಕ್ಕೂ ಹಿನ್ನೆಡೆಯಾಗಲಿದೆ. ಒಂದು ವೇಳೆ ಕಾಂಗ್ರೆಸ್ ಅಭ್ಯರ್ಥಿಯೇ ಗೆದ್ದರೆ ಯಥಾಸ್ಥಿತಿಯಂತೆಯೇ ಕೆ.ವೈ. ನಂಜೇಗೌಡ ಶಾಸಕರಾಗಿ ಮುಂದುವರೆಯಲಿದ್ದಾರೆ.
ಪರಾಜಿತ ಅಭ್ಯರ್ಥಿ ಮಂಜುನಾಥಗೌಡ ಅವರು ಮತ ಎಣಿಕೆ ಪಾರದರ್ಶಕವಾಗಿ ನಡೆದಿಲ್ಲ ಎಂದು ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದರು. 2023 ರ ಚುನಾವಣೆಯಲ್ಲಿ ಕಾಂಗ್ರೆಸ್ ನ ಕೆ.ವೈ.ನಂಜೇಗೌಡ 248 ಮತಗಳಿಂದ ಗೆದ್ದಿದ್ದರು. ಆದರೆ ಮಾಲೂರು ವಿಧಾನಸಭಾ ಕ್ಷೇತ್ರದ ಮತ ಎಣಿಕೆಯಲ್ಲಿ ಲೋಪವಾಗಿದ್ದು, ಈ ಸಂಬಂಧ ನಂಜೇಗೌಡ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕೆಂದು ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್, ಸುಪ್ರೀಂಕೋರ್ಟ್ ಮರು ಮತ ಎಣಿಕೆಗೆ ಆದೇಶ ನೀಡಿತ್ತು.
ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಇಂದು (ನವೆಂಬರ್ 11) ಮಾಲೂರು ವಿಧಾನಸಭಾ ಕ್ಷೇತ್ರದ ಮತಗಳನ್ನು ಮರು ಎಣಿಕೆ ಮಾಡಲು ಕೋಲಾರ ಜಿಲ್ಲಾಡಳಿತ ನಡೆಸಿದೆ. ಕೋಲಾರದ ಟಕಮದಲ್ಲಿರುವ ತೋಟಗಾರಿಕಾ ಮಹಾವಿದ್ಯಾಲಯದಲ್ಲಿ ಮತಗಳ ಮರು ಎಣಿಕೆ ನಡೆಸಲಾಯಿತು. ಮರು ಮತಎಣಿಕೆಗೆ ಉಪವಿಭಾಗಾಧಿಕಾರಿ ಡಾ.ಎಚ್.ಪಿ.ಎಸ್. ಮೈತ್ರಿ ಅವರನ್ನು ಚುನಾವಣಾಧಿಕಾರಿಯಾಗಿ ನೇಮಕ ಮಾಡಲಾಗಿತ್ತು.