ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ಇಲ್ಲ, ಹೈಕಮಾಂಡ್ ತೀರ್ಮಾನಕ್ಕೆ ಬದ್ಧ

ಬೆಂಗಳೂರು : ತೀವ್ರ ಕುತೂಹಲ ಕೆರಳಿಸಿದ ಇಂದಿನ ಬ್ರೇಕ್ ಫಾಸ್ಟ್ ಮೀಟಿಂಗ್ ನಂತರ ಸಿಎಂ ಸಿದ್ದರಾಮಯ್ಯ ನಿವಾಸ ಕಾವೇರಿಯಲ್ಲಿ ಸಿಎಂ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದರು. ಆರಂಭದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬ್ರೇಕ್ ಫಾಸ್ಟ್ ಚೆನ್ನಾಗಿತ್ತು, ನಾನು ಡಿ.ಕೆ.ಶಿವಕುಮಾರ್, ಪೊನ್ನಣ್ಣ ಒಟ್ಟಿಗೆ ಬ್ರೇಕ್ ಫಾಸ್ಟ್ ಮಾಡಿದ್ವಿ. ಮೊನ್ನೆಯೇ ಹೈಕಮಾಂಡ್ ಫೋನ್ ಮಾಡಿದ್ದರು. ಅನಗತ್ಯವಾಗಿ ಕೆಲವು ಗೊಂದಲ ನಿರ್ಮಾಣವಾಯಿತು. ಅದನ್ನು ಬಗೆಹರಿಸಲು ಇಂದು ಇಬ್ಬರೂ ನಿಮ್ಮ ಮುಂದೆ ಕುಳಿತಿದ್ದೇವೆ ಎಂದರು.

ನಮ್ಮಿಬ್ಬರ ನಡುವೆ ಯಾವುದೇ ಗೊಂದಲ, ಭಿನ್ನಾಭಿಪ್ರಾಯಗಳಿಲ್ಲ. ಮುಂದೆಯೂ ಅದು ಬರಲ್ಲ. ನಮಗೆ ಕರೆ ಮಾಡಿದ್ದ ಹೈಕಮಾಂಡ್​ ನಾಯಕರು, ಗೊಂದಲ ತಿಳಿ ಮಾಡುವ ಕೆಲಸ ಮಾಡಿ ಎಂದು ಸೂಚನೆ ನೀಡಿದ್ದರು. ಅದರಂತೆ ನಡೆದುಕೊಳ್ಳುತ್ತೇವೆ. ಹೈಕಮಾಂಡ್ ಸೂಚನೆಯಂತೆ ನಾವಿಬ್ಬರೂ ನಡೆದುಕೊಳ್ಳುತ್ತೇವೆ. ಹೀಗಾಗಿ ನಮ್ಮ ನಡುವೆ ನಾಳೆಯಿಂದ ಯಾವುದೇ ಗೊಂದಲ ಇರಲ್ಲ. ಈಗಲೂ ಕೂಡ ಯಾವುದೇ ಗೊಂದಲ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

2028 ರಲ್ಲಿ ಕಾಂಗ್ರೆಸ್ ಅನ್ನು ಮರಳಿ ಅಧಿಕಾರಕ್ಕೆ ತರುವ ಬಗ್ಗೆಯೂ ಚರ್ಚಿಸಿದ್ದೇವೆ. ನಾವು ಒಟ್ಟಿಗೆ ಹೋಗುತ್ತೇವೆ. ನಮ್ಮ ನಡುವೆ ಯಾವುದೇ ವ್ಯತ್ಯಾಸಗಳಿಲ್ಲ ಮತ್ತು ಭವಿಷ್ಯದಲ್ಲಿ ಕೂಡ ಬರುವುದಿಲ್ಲ. ಸರ್ಕಾರ ಅಥವಾ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ. ನನಗೆ ತಿಳಿದಿರುವಂತೆ, ಕೆಲವು ಶಾಸಕರು ಸಚಿವರಾಗಲು ಬಯಸುತ್ತಾರೆ, ಆದ್ದರಿಂದ ಅವರು ಹೈಕಮಾಂಡ್ ಅನ್ನು ಭೇಟಿ ಮಾಡಲು ದೆಹಲಿಗೆ ಹೋಗಿರಬಹುದು. ಅವರು ನಾಯಕತ್ವದ ವಿರುದ್ಧ ಇದ್ದಾರೆ ಎಂದರ್ಥವಲ್ಲ ಎಂದರು.

ಹೈಕಮಾಂಡ್ ಮಾತಿಗೆ ಡಿಕೆ ನಾನು ಇಬ್ಬರೂ ಬದ್ಧ..!

ಎಲ್ಲಾ ವಿಷಯಗಳಲ್ಲಿಯೂ ನಾನು ಮತ್ತು ಶಿವಕುಮಾರ್ ಇಬ್ಬರೂ ಪಕ್ಷದ ಕೇಂದ್ರ ನಾಯಕತ್ವಕ್ಕೆ ಬದ್ಧರಾಗಿದ್ದೇವೆ ಎಂದು ಪುನರುಚ್ಚರಿಸಿದ ಸಿದ್ದರಾಮಯ್ಯ, ಹೈಕಮಾಂಡ್ ಏನು ಹೇಳುತ್ತದೆಯೋ, ನಾವು ಅದರಂತೆ ನಡೆಯುತ್ತೇವೆ. ಹೈಕಮಾಂಡ್ ಏನು ಹೇಳುತ್ತದೆಯೋ ಅದನ್ನು ನಾವು ಅನುಸರಿಸುತ್ತೇವೆ. ನಾಳೆಯಿಂದ ಯಾವುದೇ ಗೊಂದಲ ಇರುವುದಿಲ್ಲ, ಕೆಲವು ಮಾಧ್ಯಮ ವರದಿಗಾರರು ಗೊಂದಲವನ್ನು ಸೃಷ್ಟಿಸಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ನವರು ಸುಳ್ಳು ಆರೋಪಗಳನ್ನು ಹಬ್ಬಿಸುತ್ತಾರೆ. ಅವಿಶ್ವಾಸ ನಿರ್ಣಯ ಮಂಡಿಸುವ ಬಗ್ಗೆ ಖಾಲಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಬಿಜೆಪಿಯವರು ಕೇವಲ 60 ಮತ್ತು ಜೆಡಿಎಸ್ 18 ಶಾಸಕರನ್ನು ಹೊಂದಿದ್ದಾರೆ. ಅವರು ನಮ್ಮ ಸಂಖ್ಯೆಗಳಿಗೆ ಹೊಂದಿಕೆಯಾಗುವುದಿಲ್ಲ. ನಾವು 140 ಶಾಸಕ ಬಲ ಹೊಂದಿದ್ದೇವೆ. ಅವರದ್ದು ವ್ಯರ್ಥ ಪ್ರಯತ್ನ. ನಾವು ಅವರ ಸುಳ್ಳು ಆರೋಪಗಳನ್ನು ಎದುರಿಸುತ್ತೇವೆ ಎಂದರು.

Leave a Reply

Your email address will not be published. Required fields are marked *