‘ಸಿದ್ದರಾಮಯ್ಯರನ್ನ ಕೆಳಗಿಳಿಸಿದ್ರೆ ಕಾಂಗ್ರೆಸ್‌ ಕತೆ ಕ್ಲೋಸ್’: ವರ್ತೂರು ಪ್ರಕಾಶ್ ಎಚ್ಚರಿಕೆ

ಕೋಲಾರ: ಸಿದ್ದರಾಮಯ್ಯ ಅವರು ಕುರುಬ ಸಮಾಜದ ಏಕೈಕ ನಾಯಕರಲ್ಲ, ಅಹಿಂದ ವರ್ಗದ ದೊಡ್ಡ ನಾಯಕರು. ಒಂದು ವೇಳೆ ಸಿಎಂ ಸ್ಥಾನದಿಂದ ಸಿದ್ದರಾಮಯ್ಯರನ್ನು ಕೆಳಗೆ ಇಳಿಸಿದ್ರೆ ಕಾಂಗ್ರೆಸ್​ ಕತೆ ಕ್ಲೋಸ್​ ಎಂದು ಹೇಳುವ ಮೂಲಕ ಮಾಜಿ ಸಚಿವ ವರ್ತೂರು ಪ್ರಕಾಶ್ ಸಿಎಂ ಸಿದ್ದರಾಮಯ್ಯ ಪರ ಬ್ಯಾಟ್​ ಬೀಸಿದ್ದಾರೆ.

ಕೋಲಾರದಲ್ಲಿ ದಾಸಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿದ ವರ್ತೂರು ಪ್ರಕಾಶ್​, ಸಿದ್ದರಾಮಯ್ಯರನ್ನು ಬದಲಾಯಿಸುವ ಯೋಚನೆ ಮಾಡಬಾರದು. ಒಂದು ವೇಳೆ ಸಿದ್ದರಾಮಯ್ಯರನ್ನು ಕೆಳಗಿಳಿಸಿದರೆ ಅಹಿಂದ ವರ್ಗದ 25 ಲಕ್ಷ ಜನರನ್ನು ಸೇರಿಸಿ ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್‌ಗೆ ಘೇರಾವ್ ಹಾಕುವುದಾಗಿ ಎಚ್ಚರಿಕೆ ನೀಡಿದರು.

ಇದನ್ನೂ ಓದಿ : ಬಿಜೆಪಿಯವ್ರು ಸುಳ್ಳಿನ ಸರದಾರರು, ಸುಳ್ಳೇ ಅವರ ಮನೆಯ ದೇವರು: ಸಿದ್ದು ಕಿಡಿ
ಇನ್ನು ಸಿದ್ದರಾಮಯ್ಯ ಅವರು ಕುರುಬ ಸಮಾಜದ ಒಬ್ಬರಲ್ಲ, ಅಹಿಂದ ವರ್ಗದ ಎಲ್ಲ ಸಮಾಜಗಳ ನಾಯಕರು. ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಬಲಗೊಂಡಿದೆ.

ಇದೇ ವೇಳೆ ಇತ್ತೀಚೆಗೆ ಸಿಎಂ ಸ್ಥಾನದ ಬದಲಾವಣೆಯ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರಿಂದ ಬಂದ ಹೇಳಿಕೆಗಳನ್ನು ಉಲ್ಲೇಖಿಸಿ, ಯಾರು ಸಿಎಂ ಆಗಬೇಕು ಎಂಬುದು ಹೈಕಮಾಂಡ್ ನಿರ್ಧಾರ. ಆದರೆ ಸಿದ್ದರಾಮಯ್ಯರನ್ನು ಇಳಿಸುವ ಪ್ರಯತ್ನ ಮಾಡಿದ್ರೆ ಕಾಂಗ್ರೆಸ್ ಪಕ್ಷದ ಕಥೆ ಕ್ಲೋಸ್ ಆಗುತ್ತದೆ ಎಂದರು.

ಸದ್ಯ ವರ್ತೂರು ಪ್ರಕಾಶ್ ಬಿಜೆಪಿ ಮುಖಂಡರಾಗಿ ಸಿದ್ದರಾಮಯ್ಯರ ಪರ ಬ್ಯಾಟಿಂಗ್ ಮಾಡಿರುವುದು ಆಸಕ್ತಿಯ ವಿಷಯವಾಗಿದೆ. ಸಿದ್ದರಾಮಯ್ಯ ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಅವರನ್ನು ಇಳಿಸುವುದು ಕಾಂಗ್ರೆಸ್‌ಗೆ ಆತ್ಮಹತ್ಯೆ ಸಮಾನ ಎಂದರು.

ಒಟ್ಟಿನಲ್ಲಿ ಕನಕದಾಸ ಜಯಂತಿ ವೇದಿಕೆಯಲ್ಲಿ ಕುರುಬ ಸಮುದಾಯದ ಮುಖಂಡ ವರ್ತೂರ್‌ ಅವರ ಈ ಹೇಳಿಕೆಗಳು ರಾಜಕೀಯ ಚರ್ಚೆಗೆ ದಾರಿ ಮಾಡಿವೆ. ಸಿದ್ದರಾಮಯ್ಯ ಅವರು 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಅಹಿಂದ ವರ್ಗದ ಮತಗಳನ್ನು ಗಟ್ಟಿಗೊಳಿಸಿದ್ದಾರೆ. ಗ್ಯಾರಂಟಿ ಯೋಜನೆಗಳು ಮತ್ತು ಅಹಿಂದ ಸಮಾಜಗಳಿಗೆ ಮೀಸಲಾತಿ ಹೆಚ್ಚಳದಿಂದ ಅವರ ಜನಪ್ರಿಯತೆ ಗಗನಕ್ಕೇರಿದೆ. ಆದರೆ ಪಕ್ಷದೊಳಗೆ ಡಿ.ಕೆ. ಶಿವಕುಮಾರ್ ಮತ್ತು ಇತರ ನಾಯಕರೊಂದಿಗೆ ಸ್ಪರ್ಧೆಯಿಂದ ಸಿಎಂ ಬದಲಾವಣೆಯ ಚರ್ಚೆಗಳು ಎದ್ದಿವೆ.

Leave a Reply

Your email address will not be published. Required fields are marked *