ಡಿಕೆಶಿ ಭೇಟಿಗೆ ಸಮಯ ಕೊಡದ ರಾಹುಲ್, ಹರಿಪ್ರಸಾದ್​​ಗೆ ಕೊಟ್ಟಿದ್ದೇಕೆ..!?

ನವದೆಹಲಿ : ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ನಡುವೆ ಕುರ್ಚಿ ಕದನ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಡಿಕೆ ಶಿವಕುಮಾರ್ ಅವರನ್ನ ಎರಡುವರೆ ವರ್ಷದ ಅವಧಿಗೆ ಸಿಎಂ ಮಾಡಬೇಕೆಂದು ಅವರ ಬೆಂಬಲಿಗರು ದೆಹಲಿ ಪರೇಡ್ ನಡೆಸಿದ್ದಾರೆ. ಈಗಾಗಲೇ ಡಿಕೆಶಿ ಬಣ ಎರಡು ತಂಡಗಳಾಗಿ ದೆಹಲಿಯಲ್ಲೇ ಬೀಡುಬಿಟ್ಟಿದ್ದು, ಹೈಕಮಾಂಡ್ ನಾಯಕರ ಭೇಟಿಗೆ ಕಸರತ್ತು ನಡೆಸಿವೆ.

ಈ ಎಲ್ಲಾ ಬೆಳವಣಿಗಳ ನಡುವೆ ವಿಧಾನಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್, ಸೈಲೆಂಟ್ ಆಗಿಯೇ ರಾಹುಲ್ ಗಾಂಧಿಯನ್ನು ಭೇಟಿ ಮಾಡಿದ್ದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ವಿಶೇಷ ಅಂದ್ರೆ ಡಿಕೆಶಿ ಭೇಟಿಗೆ ಸಮಯ ಕೊಡದ ರಾಹುಲ್, ಹರಿಪ್ರಸಾದ್​​ಗೆ ಕೊಟ್ಟಿರುವುದು ಅಚ್ಚರಿಗೆ ಕಾರಣವಾಗಿದೆ.

ಬೆಂಗಳೂರಿನಲ್ಲಿ ಡಿಕೆಶಿ ಹಾಗೂ ಸಿದ್ದರಾಮಯ್ಯ ಬಣ ಪ್ರತ್ಯೇಕವಾಗಿ ರಹಸ್ಯ ಸಭೆ ನಡೆಸುತ್ತಿವೆ. ಮಾಧ್ಯಮಗಳ ಮುಂದೆ ತಮ್ಮ ತಮ್ಮ ನಾಯಕರ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಸಹ ದೆಹಲಿಗೆ ತೆರಳಿ ರಾಹುಲ್ ಗಾಂಧಿ ಭೇಟಿ ಯತ್ನ ವಿಫಲವಾಗಿದ್ದು, ಅಸಮಾಧಾನದಿಂದಲೇ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.

ಆದ್ರೆ, ಸೋನಿಯಾ ಗಾಂಧಿ ಹಾಗೂ ರಾಹುಲ್​​ ಗಾಂಧಿಗೆ ಅತ್ಯಾಪ್ತರಾಗಿರುವ ಬಿ.ಕೆ.ಹರಿಪ್ರಸಾದ್ ಸೈಲೆಂಟ್ ಆಗಿಯೇ ಏಕಾಂಗಿಯಾಗಿ ದೆಹಲಿ ತೆರಳಿ ಇಂದು ಮಧ್ಯಾಹ್ನ 12 ಗಂಟೆಗೆ ರಾಹುಲ್ ಗಾಂಧಿ ಅವರನ್ನ ಭೇಟಿ ಮಾಡಿದ್ದು, ಕರ್ನಾಟಕ ಕಾಂಗ್ರೆಸ್​​ನಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ ಶೀಘ್ರವೇ ಎಲ್ಲಾ ಗೊಂದಲಗಳಿಗೆ ಬ್ರೇಕ್ ಹಾಕುವಂತೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಡಿಕೆ ಶಿವಕುಮಾರ್ ಬಣದ ದೆಹಲಿ ಭೇಟಿ ಹೆಚ್ಚಾದರೆ ಸಿಎಂ ಸಿದ್ದರಾಮಯ್ಯನವರ ಬಣದಿಂದಲೂ ಒತ್ತಡ ಹೆಚ್ಚಾಗಬಹುದು. ಇದರಿಂದ ಪಕ್ಷಕ್ಕೆ ಹೆಚ್ಚು ಡ್ಯಾಮೇಜ್ ಆಗಲಿದೆ. ಹೀಗಾಗಿ ಶೀಘ್ರವೇ ಒಂದು ಅಂತಿಮ ತೀರ್ಮಾನಕ್ಕೆ ಬಂದು ಈ ಬಣ ರಾಜಕೀಯಕ್ಕೆ ಬ್ರೇಕ್ ಹಾಕಬೇಕೆಂದು ಮನವಿ ಮಾಡಿದ್ದಾರೆ.

ಸದ್ಯ ಕರ್ನಾಟಕ ಕಾಂಗ್ರೆಸ್​​ನಲ್ಲಿ ನಡೆಯುತ್ತಿರುವ ರಾಜಕೀಯ ಚಟುವಟಿಕೆಗಳ ಬಗ್ಗೆ ರಾಹುಲ್ ಗಾಂಧಿ, ಹರಿಪ್ರಸಾದ್ ಅವರಿಂದ ಸಂಪೂರ್ಣವಾಗಿ ಪಡೆದುಕೊಂಡಿದ್ದು, ಮುಂದೆ ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎನ್ನುವುದೇ ತೀವ್ರ ಕುತೂಹಲ ಮೂಡಿಸಿದೆ.

Leave a Reply

Your email address will not be published. Required fields are marked *