ಸಂಪುಟ ಪುನರ್‌ ರಚನೆ ಕಸರತ್ತು, ದೆಹಲಿಗೆ ತೆರಳಿದ ಕಾಂಗ್ರೆಸ್ ಶಾಸಕರಿಗೆ ಡಿಕೆಶಿ ಶಾಕ್, ಖಡಕ್ ವಾರ್ನಿಂಗ್!

ಬೆಂಗಳೂರು : ಸಂಪುಟ ಪುನಾರಚನೆ ಮತ್ತು ಮಂತ್ರಿ ಸ್ಥಾನಕ್ಕೆ ದೆಹಲಿಗೆ ತೆರಳಿರುವ ಕಾಂಗ್ರೆಸ್ ಶಾಸಕರಿಗೆ ಡಿಸಿಎಂ ಡಿಕೆ ಶಿವಕುಮಾರ್ ಶಾಕ್ ನೀಡಿದ್ದು, ಅನಾವಶ್ಯಕ ಗೊಂದಲ ಸೃಷ್ಟಿಸದಂತೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ 3 ವರ್ಷ ತುಂಬಿದ ಹಿನ್ನಲೆಯಲ್ಲಿ ಸಂಪುಟ ಪುನಾರಚನೆ ಮಾಡಬೇಕು ಮತ್ತು ಬೇರೆ ಶಾಸಕರಿಗೂ ಮಂತ್ರಿಯಾಗುವ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್‌ನ ಕೆಲ ಶಾಸಕರು ದೆಹಲಿಗೆ ತೆರಳಿದ್ದಾರೆ.

ಇದನ್ನೂ ಓದಿ : ಬಿಜೆಪಿ ಕಚೇರಿಯಲ್ಲಿ 28 ವರ್ಷ ಗುಮಾಸ್ತನಾಗಿದ್ದ ವ್ಯಕ್ತಿಗೆ ಒಲಿದ ಚುನಾವಣಾ ಟಿಕೆಟ್..!

ಶಾಸಕರ ದೆಹಲಿ ಯಾತ್ರೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ‘ಪಕ್ಷದ ಹೈಕಮಾಂಡ್ ಅವರನ್ನು ಭೇಟಿ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಮತ್ತು ದೆಹಲಿಯಲ್ಲಿ ಕಾಂಗ್ರೆಸ್ ಶಾಸಕರ ಗುಂಪು ಹೈಕಮಾಂಡ್ ಅನ್ನು ಭೇಟಿ ಮಾಡುವ ಬಗ್ಗೆ ಅನಗತ್ಯ ಹೇಳಿಕೆಗಳನ್ನು ನೀಡದಂತೆ ಎಲ್ಲಾ ಶಾಸಕರಿಗೆ ಮನವಿ ಮಾಡುತ್ತೇನೆ’ ಎಂದರು.

‘ಪಕ್ಷದ ಶಿಸ್ತನ್ನು ಯಾರೂ ಮೀರಬೇಡಿ. ಪಕ್ಷದ ಚೌಕಟ್ಟಿನ ಒಳಗೆ ಎಲ್ಲಾ ಶಾಸಕರು ಮಾತನಾಡಬೇಕು. ಕೆಲವರು ಏನೇನು​ ಮಾತನಾಡಿದ್ದಾರೋ ಎಲ್ಲವನ್ನೂ ಗಮನಿಸಿದ್ದೇನೆ. ಆದರೆ ಮೀಡಿಯಾ ನಿಮ್ಮ ಭವಿಷ್ಯ ಅಲ್ಲ, ಪಾರ್ಟಿ ನಿಮ್ಮ ಭವಿಷ್ಯ. ಪಾರ್ಟಿಯಲ್ಲೇ ಎಲ್ಲರ ಭವಿಷ್ಯವಿದೆ, ಪಕ್ಷದ ಚೌಕಟ್ಟಿನೊಳಗೆ ಇರಬೇಕು. ಇದು ಸಂಪುಟ ಪುನಾರಚನೆ ಕೇಳುವ ಟೈಂ ಅಲ್ಲ. ಈಗ ಮಂತ್ರಿ ಮಾಡೋ ಟೈಂ ಅಲ್ಲ, ಮೊದಲು ಚುನಾವಣೆ ಮಾಡೋಣ ಎಂದು ಡಿಕೆಶಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಸಿಎಂ ಬದಲಾವಣೆಯ ವಿಷಯ ನಮ್ಮ ಮುಂದೆ ಇಲ್ಲ..!

ಈ ಕುರಿತು ದೆಹಲಿಯಲ್ಲಿ ಮಾತನಾಡಿದ್ದ ಟಿಬಿ ಜಯಚಂದ್ರ ಅವರು, ಇದು ನನಗೆ ನಿತ್ಯದ ಕೆಲಸ. ನಾನು ದೆಹಲಿಯಲ್ಲಿ ರಾಜ್ಯ ಪ್ರತಿನಿಧಿ. ವಿಧಾನಸಭಾ ಚುನಾವಣೆಯ ನಂತರ ನಾನು ಇಲ್ಲಿದ್ದೇನೆ. ಈಗ ಇಂದು ನಾನು ಮಾತ್ರ ಬಂದಿದ್ದೇನೆ. ಅನೇಕ ಶಾಸಕರು ಸಹ ಬರುತ್ತಿದ್ದಾರೆ. ನಾವು ಹೈಕಮಾಂಡ್ ಅನ್ನು ಭೇಟಿ ಮಾಡಿ ಪುನರ್‌ ರಚನೆಗಾಗಿ ಮನವೊಲಿಸಲು ಬಯಸಿದ್ದೆವು, ಅದು ಅನೇಕ ಹಿರಿಯ ಶಾಸಕರ ಬೇಡಿಕೆಯಾಗಿದೆ, ಈ ಸರ್ಕಾರಕ್ಕೆ ಮೂರು ವರ್ಷಗಳ ಕಾಲ ಅವಕಾಶ ನೀಡಲಾಗಿದೆ. ಮೂರು ವರ್ಷಗಳು ಮುಗಿದಿವೆ, ಕೇವಲ ಎರಡು ವರ್ಷಗಳು ಮಾತ್ರ ಉಳಿದಿವೆ. ಅದಕ್ಕಾಗಿಯೇ ನಾವೆಲ್ಲರೂ ಹೆಚ್ಚಿನ ಬೇಡಿಕೆಯನ್ನು ಪೂರೈಸಲು ಬಯಸಿದ್ದೇವೆ ಎಂದು ಹೇಳಿದ್ದಾರೆ.

ಸಿಎಂ ಬದಲಾವಣೆಯ ವಿಷಯ ನಮ್ಮ ಮುಂದೆ ಇಲ್ಲ. ಅದು ನಾಲ್ಕು ಗೋಡೆಗಳ ಒಳಗೆ ಇದೆ. ಸಿಎಂ, ಡಿಸಿಎಂ ಮತ್ತು ಎಐಸಿಸಿ ಅಧ್ಯಕ್ಷರು ಮತ್ತು ರಾಹುಲ್ ಗಾಂಧಿ ಈ ಬಗ್ಗೆ ನಿರ್ಧರಿಸುತ್ತಾರೆ. ಪುನರ್‌ ರಚನೆಗಾಗಿ ಹೈಕಮಾಂಡ್ ಅನ್ನು ಪ್ರಭಾವಿಸಲು ಅಥವಾ ವಿನಂತಿಸಲು ಮಾತ್ರ ನಾವು ಬಂದಿದ್ದೇವೆ ಎಂದು ಹೇಳಿದರು.

Leave a Reply

Your email address will not be published. Required fields are marked *