ಸಿದ್ದರಾಮಯ್ಯ ಪದತ್ಯಾಗಕ್ಕೆ ಮಾನಸಿಕವಾಗಿ ಸಿದ್ದರಾಗಿದ್ದಾರೆ : ರಾಜಣ್ಣ ಸ್ಫೋಟಕ ಹೇಳಿಕೆ

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿ ಮುಂದುವರಿಯಲು ಅಥವಾ ಪದತ್ಯಾಗ ಮಾಡಲು ಎರಡಕ್ಕೂ ಸಿದ್ಧರಾಗಿದ್ದಾರೆ ಎಂದು ಮಾಜಿ‌ ಸಚಿವ ಕೆ.ಎನ್.ರಾಜಣ್ಣ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜಣ್ಣ, ನಾಯಕತ್ವ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್ ಗೊಂದಲ ಬಗೆಹರಿಸಬೇಕು. ಗೊಂದಲ ಬಗೆಹರಿಸಿದಷ್ಟು ರಾಜ್ಯಕ್ಕೆ ಒಳ್ಳೆಯದು. ಗೊಂದಲ ಮುಂದುವರಿಯಲು ಹೈಕಮಾಂಡ್ ಅವಕಾಶ ನೀಡಬಾರದು ಎಂದರು.

ಇನ್ನು ಹೈಕಮಾಂಡ್ ಏನು ಹೇಳುತ್ತದೆಯೋ ಅದಕ್ಕೆ ಸಿದ್ದರಾಮಯ್ಯ ಬದ್ಧರಾಗಿದ್ದಾರೆ. ಇದು ಆತುರದಲ್ಲಿ ತೆಗೆದುಕೊಳ್ಳುವ ನಿರ್ಧಾರ ಅಲ್ಲ. ಸಿದ್ದರಾಮಯ್ಯ ಅವರು ಅಧಿಕಾರದಲ್ಲಿ ಮುಂದುವರಿಯಲೂ ಸಿದ್ದರಾಗಿದ್ದಾರೆ ಮತ್ತು ಪದತ್ಯಾಗಕ್ಕೂ ಸಿದ್ದರಾಗಿದ್ದಾರೆ ಎಂದರು‌.

ಇದರಲ್ಲಿ ಪಕ್ಷದ ಭವಿಷ್ಯ ಅಡಗಿರುತ್ತದೆ. ಹೀಗಾಗಿ ಹೈಕಮಾಂಡ್ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳುವ ವಿಶ್ವಾಸವಿದೆ. ಸಿಎಂ ಜೊತೆಗೆ ಸಭೆ ಮಾಡಿದಾಗಲೂ ಅವರು ಓಪನ್ ಮೈಂಡ್​​ನಲ್ಲಿ ಇದ್ದಾರೆ. ರಾಹುಲ್ ಗಾಂಧಿ ಸೂಚನೆ ಪಾಲನೆ ಮಾಡುತ್ತೇನೆ. ಆಗ ನಿಮ್ಮೆಲ್ಲರ ಸಹಕಾರ ಇರಬೇಕು ಎಂದು ಸಿಎಂ ಅಭಿಮತ ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿ ತೆಗೆದುಕೊಳ್ಳುವ ತೀರ್ಮಾನದಂತೆ ನಡೆಯೋಣ ಎಂದಿದ್ದಾರೆ ಎಂದು ತಿಳಿಸಿದರು.

ದಲಿತರು ಸಿಎಂ ಆಗ್ಬೇಕು..!

ಅಧಿಕಾರ ಶಾಶ್ವತವಲ್ಲ. ಅಧಿಕಾರ ಕಳೆದುಕೊಂಡವರು ಗಳಿಸ್ತಾರೆ. ರಾಹುಲ್ ಗಾಂಧಿ ನಿರ್ದೇಶನದಂತೆ ಹೋಗಬೇಕು ಎಂಬುದು ಸಿಎಂ ಮನಸ್ಥಿತಿ. ಸಿದ್ದರಾಮಯ್ಯ ಮುಂದುವರಿಯಬೇಕು ಎಂಬ ಬಗ್ಗೆ ನಾವೆಲ್ಲ ನಮ್ಮ ಅಭಿಪ್ರಾಯವನ್ನು ಹೈಕಮಾಂಡ್​ಗೆ ಹೇಳಿದ್ದೇವೆ ಎಂದರು.

ದಲಿತ ಸಿಎಂ ಆಗಬೇಕು ಎಂಬುದಕ್ಕೆ ನಾನು ಈಗಲೂ ಬದ್ಧ. ಅಹಿಂದ ವರ್ಗ ನಿಜವಾಗಿ ಸಮಾಧಾನವಾಗಿಲ್ಲ. 2013-18 ರ ಸಿದ್ದರಾಮಯ್ಯಗೂ ಈಗಿನ 2023-28 ಸಿದ್ದರಾಮಯ್ಯಗೂ ಬಹಳ ವ್ಯತ್ಯಾಸ ಇದೆ. ಮುಂದಿನ ಚುನಾವಣೆ ಎರಡು ವರ್ಷ ಇದೆ. ಮುಂದಿನ ರಾಜಕೀಯ ಹೀಗೇ ಆಗಬಹುದು ಎಂಬುದನ್ನು ಹೇಳಲು ಈಗಲೇ ಸಾಧ್ಯವಿಲ್ಲ. ರಾಜಕಾರಣದಲ್ಲಿ ಬಹಳಷ್ಟು ನೀರು ಹರಿಬೇಕಾದ ಸಮಯವೂ ಇದೆ ಎಂದರು.

Leave a Reply

Your email address will not be published. Required fields are marked *