ಕಲಬುರ್ಗಿ : ರಾಜ್ಯ ರಾಜಕೀಯದಲ್ಲಿ ಕಳೆದ ಹಲವು ದಿನಗಳಿಂದ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ನಾಯಕತ್ವ ಬದಲಾವಣೆಯ ವದಂತಿಗಳಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇತಿ ಶ್ರೀ ಹಾಡಿದ್ದಾರೆ.
ರಾಜ್ಯದಲ್ಲಿ ಸದ್ಯಕ್ಕೆ ಮುಖ್ಯಮಂತ್ರಿ ಬದಲಾವಣೆಯ ಯಾವುದೇ ಪ್ರಸ್ತಾವನೆ ಇಲ್ಲ, ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ವೈಶಾಖ ಬುದ್ಧ ಪೂರ್ಣಿಮೆ ಸಮಾರಂಭದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯದಲ್ಲಿ ನಾಯಕತ್ವದ ಕುರಿತು ಗೊಂದಲಗಳಿರುವುದು ನಿಜ. ಆದರೆ, ಈ ಗೊಂದಲಗಳನ್ನು ಶೀಘ್ರದಲ್ಲಿಯೇ ಬಗೆಹರಿಸುತ್ತೇವೆ. ಪ್ರಸ್ತುತ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾರೆ, ಹೀಗಾಗಿ ಬದಲಾವಣೆಯ ಚರ್ಚೆ ಅಪ್ರಸ್ತುತ. ಒಂದು ವೇಳೆ ಅಂತಹ ಸಂದರ್ಭ ಬಂದರೆ, ಹಿರಿಯ ನಾಯಕರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಅದಕ್ಕೆ ಇನ್ನೂ ಸಮಯವಿದೆ,” ಎಂದು ಅವರು ತಿಳಿಸಿದರು.
ಇದನ್ನೂ ಓದಿ : ಅಲ್ಪಸಂಖ್ಯಾತರಿಗೆ ಬಂಪರ್ ಗಿಫ್ಟ್.. ಮುಸ್ಲಿಂ ಕಾಲೋನಿಗಳ ಅಭಿವೃದ್ಧಿಗೆ ₹600 ಕೋಟಿ ಅನುದಾನ ನೀಡಿದ ಕಾಂಗ್ರೆಸ್ ಸರ್ಕಾರ
ಇನ್ನು ಖರ್ಗೆ ಅವರೇ ಸಿಎಂ ಆಗಲಿ ಎಂಬ ಗೃಹ ಸಚಿವ ಪರಮೇಶ್ವರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರು ಹೇಳುತ್ತಾರೆ, ನೀವೂ ಹೇಳುತ್ತೀರಿ, ಹೈಕಮಾಂಡ್ ಕೂಡ ಹೇಳಬಹುದು. ಆದರೆ ಎಲ್ಲದಕ್ಕೂ ಹಣೆಬರಹ ಬೇಕು. ಹಣೆಬರಹಕ್ಕಿಂತ ಹೆಚ್ಚಾಗಿ ನಮಗೆ ಪಕ್ಷದ ಸಿದ್ಧಾಂತ ಮುಖ್ಯ” ಎಂದು ಮಾರ್ಮಿಕವಾಗಿ ಉತ್ತರಿಸಿದರು.
ಪಕ್ಷಕ್ಕಾಗಿ ಹಲವು ದಶಕಗಳಿಂದ ದುಡಿಯುತ್ತಿರುವುದಾಗಿ ಸ್ಮರಿಸಿದ ಖರ್ಗೆ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಂತಹ ಹಿರಿಯ ನಾಯಕರು ಹೈಕಮಾಂಡ್ ಮೂಲಕ ಇಂತಹ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರು.