ತಮಿಳುನಾಡು : ಮೇಕೆದಾಟು ಯಾಜನೆಗೆ ತಮಿಳುನಾಡಿನ ಅನುಮತಿ ಇಲ್ಲದೆ ಒಂದು ಇಟ್ಟಿಗೆಯನ್ನೂ ಹಾಕುವುದಕ್ಕೆ ಬಿಡುವುದಿಲ್ಲ ಎಂದು ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಬಿ.ಮಾಣಿಕ್ಯಂ ಟ್ಯಾಗೋರ್ ತಮ್ಮದೇ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವ ಕರ್ನಾಟಕ ಸರ್ಕಾರಕ್ಕೆ ವಾರ್ನ್ ಮಾಡಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಕಾವೇರಿ ಜಲ ವಿವಾದ ನ್ಯಾಯಮಂಡಳಿ ಅಂತಿಮ ತೀರ್ಪು ಮತ್ತು 2018ರ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಕರ್ನಾಟಕ ಸರ್ಕಾರ ಯೋಜನೆ ರೂಪಿಸುತ್ತಿದೆ. ಕರ್ನಾಟಕ ಸರ್ಕಾರದ ಏಕಪಕ್ಷೀಯ ನಡೆಗಳನ್ನು ಎದುರಿಸಲು, ತಮಿಳುನಾಡು ರೈತರ ಪರ ನಿಲ್ಲಲು ರಾಜ್ಯ ಕಾಂಗ್ರೆಸ್ ಸಿದ್ಧವಾಗಿದೆ ಎಂದರು. ಇದೇ ಸಂದರ್ಭದಲ್ಲಿ ಕಾವೇರಿ ತೀರದ ರೈತರ ಹಕ್ಕುಗಳನ್ನು ರಕ್ಷಿಸಲು ರಾಜ್ಯಾದ್ಯಂತ ಆಂದೋಲನಗಳನ್ನು ನಡೆಸುತ್ತೇವೆ ಎಂದು ಮಾಣಿಕ್ಯಂ ಕರ್ನಾಟಕ ಸರ್ಕಾರದ ವಿರುದ್ಧ ಗುಡುಗಿದ್ದಾರೆ.
ಇನ್ನು ಇತ್ತೀಚೆಗಷ್ಟೇ ಸಿಎಂ ಆಗಿ ಅಧಿಕಾರ ಹಿಡಿದಿರುವ ಟಿವಿಕೆ ಪಕ್ಷದ ನಾಯಕ ವಿಜಯ್ ಸಹ ಮೇಕೆದಾಟು ಯೋಜನೆಯನ್ನ ವಿರೋಧಿಸಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಒಟ್ಟಾರೆ ಮೇಕೆದಾಟು ವಿಚಾರದಲ್ಲಿ ಇಡೀ ತಮಿಳುನಾಡು ರಾಜಕಾರಣಿಗಳೆಲ್ಲಾ ಒಟ್ಟಾಗಿದ್ದು, ಕರ್ನಾಟಕದ ಸಿಎಂ ಡಿಕೆ ಶಿವಕುಮಾರ್ ಅವರ ನಡೆಯನ್ನ ಕಾದು ನೋಡಬೇಕಿದೆ.