ಅಹ್ಮದಾಬಾದ್ : ಜಾಮ್‌ನಗರ ಶಾಸಕಿ, ಸ್ಟಾರ್ ಕ್ರಿಕೆಟರ್ ರವೀಂದ್ರ ಜಡೇಜಾ ಪತ್ನಿ ರಿವಾಬಾ ಸೋಲಂಕಿ ಜಡೇಜಾ ಇಂದು ಸಚಿವೆಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ನಿನ್ನೆಯಷ್ಟೇ ಗುಜರಾತ್ ಸಚಿವ ಸಂಪುಟದ ಸಚಿವರು ಹೊಸ ಸಂಪುಟ ರಚನೆಯ ಕಾರಣಕ್ಕೆ ರಾಜೀನಾಮೆ ನೀಡಿದ್ದರು. ಇಂದು ಸಂಪುಟ ಪುನರ್ ರಚನೆಯಾಗಿದ್ದು, ರಿವಾಬಾ ಜಡೇಜಾಗೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಜಡೇಜಾ ಪತ್ನಿ ರಿವಾಬಾ ಈಗ ಗುಜರಾತ್ ಸಚಿವೆ :-
ರಿವಾಬಾ ಜಡೇಜಾ ಅವರು ತಮ್ಮ ಸಾರ್ವಜನಿಕ ಸೇವೆ ಹಾಗೂ ಮಹಿಳಾ ಸಬಲೀಕರಣ ಕಾರ್ಯಗಳಿಂದ ಸಾಕಷ್ಟು ಪ್ರಸಿದ್ಧಿ ಪಡೆದು ಜಾಮ್‌ನಗರದಿಂದ ಶಾಸಕಿಯಾಗಿದ್ದರು. ಈಗ ಅವರಿಗೆ ಗುಜರಾತ್ ಸರ್ಕಾರದಲ್ಲಿ ಸಚಿವ ಸ್ಥಾನ ಸಿಕ್ಕಿದೆ. ಇದು ಜಾಮ್‌ನಗರಕ್ಕೆ ಗುಜರಾತ್‌ನ ಎಲ್ಲೆಡೆ ಇರುವ ಮಹಿಳೆಯರಿಗೆ ಹೆಮ್ಮೆಯ ಕ್ಷಣ, ಸಾರ್ವಜನಿಕ ಸೇವೆಯಲ್ಲಿ ರಿವಾಬಾ ಜಡೇಜಾ ಅವರ ಸಮರ್ಪಣೆ ಮಹತ್ವದ್ದು ಎಂದು ಬಿಜೆಪಿ ಮೂಲಗಳು ಈ ಹೊಸ ಬೆಳವಣಿಗೆಯ ಬಗ್ಗೆ ಹೇಳಿಕೊಂಡಿದ್ದಾರೆ.
ರಿವಾಬಾ ಜಡೇಜಾ ಅವರು 1990ರ ನವಂಬರ್ 2 ರಂದು ಜನಿಸಿದ್ದು, ಸಾಮಾಜಿಕ ಸೇವೆಗಳಿಂದಲೇ ಹೆಸರಾಗಿರುವ ಗೌರವಾನ್ವಿತ ಕುಟುಂಬದಿಂದ ಅವರು ಬಂದಿದ್ದಾರೆ. ಅವರ ಪೋಷಕರಾದ ಹರ್‌ದೇವ್ ಸಿಂಗ್ ಸೋಲಂಕಿ ಹಾಗೂ ಪ್ರಫುಲ್ಲಾ ಸೋಲಂಕಿ ಅವರು ಅವರನ್ನು ಸಾಮಾಜಿಕ ಹಾಗೂ ಸಾಂಸ್ಕೃತಿಕ ಮೌಲ್ಯದೊಂದಿಗೆ ಗೌರವಾನ್ವಿತವಾಗಿ ಬೆಳೆಸಿದ್ದಾರೆ. ಗುಜರಾತ್ ಅಹ್ಮದಾಬಾದ್‌ನಲ್ಲಿರುವ ಟೆಕ್ನಾಲಾಜಿಕಲ್ ವಿವಿಯಿಂದ ಇಂಜಿನಿಯರಿಂಗ್ ಪದವಿಧರೆಯಾಗಿರುವ ರಿವಾಬಾ ಅವರು ಸೇವೆ ಸ್ತ್ರೀ ಸಬಲೀಕರಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದು, ಇದಕ್ಕಾಗಿಯೇ ಅವರು ಮಾತ್ರುಶಕ್ತಿ ಎಂಬ ಟ್ರಸ್ಟ್‌ನ್ನು ಸ್ಥಾಪಿಸಿದ್ದಾರೆ.
ಇನ್ನು ಕೆಳ ಮಟ್ಟದಿಂದ ಈ ಕಾರ್ಯದಲ್ಲಿ ಅವರು ತೊಡಗಿಸಿಕೊಂಡಿರುವುದರಿಂದ ಜಮಾನಗರದ ಜನರು ಅವರಿಗೆ ವಿಶೇಷ ಗೌರವ ನೀಡುತ್ತಾರೆ.ಸಕ್ರಿಯ ರಾಜಕಾರಣಕ್ಕೆ ಬರುವುದಕ್ಕೂ ಮೊದಲು ರಿವಾಬಾ ಜಡೇಜಾ ಅವರು ರಾಜಪೂರ್ ಸಮುದಾಯದ ಕರ್ಣಿ ಸೇನಾದ ಸದಸ್ಯೆಯಾಗಿದ್ದರು.2018ರಲ್ಲಿ ಪದ್ಮಾವತ್ ಸಿನಿಮಾಗೆ ಈ ಕರ್ಣಿ ಸೇನಾ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಈ ಸಂಸ್ಥೆಯ ಮಹಿಳಾ ವಿಭಾಗವನ್ನು ಪ್ರತಿನಿಧಿಸುವಲ್ಲಿ ರಿವಾಬಾ ಮಹತ್ವದ ಪಾತ್ರ ವಹಿಸಿದ್ದಾರೆ. ರಿವಾಬಾ ಅವರು 2019ರಲ್ಲಿ ಬಿಜೆಪಿ ಸೇರಿದ್ದರು. ಅವರ ಚಿಕ್ಕಪ್ಪ ಹರಿಸಿನ್ಹಾ ಸೋಲಂಕಿ ಅವರು ಕಾಂಗ್ರೆಸ್ ನಾಯಕರಾಗಿದ್ದು, ನಂತರದಲ್ಲಿ ಬಿಜೆಪಿ ಸೇರಿದ್ದರು. 2016ರಲ್ಲಿ ಅವರು ಭಾರತೀಯ ಕ್ರಿಕೆಟರ್ ರವೀಂದ್ರ ಜಡೇಜಾ ಅವರನ್ನು ಮದುವೆಯಾಗಿದ್ದರು. ಈ ದಂಪತಿಗೆ ಒಬ್ಬಳು ಪುತ್ರಿ ಇದ್ದಾಳೆ.