ಬೆಂಗಳೂರು : ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ನಿವಾಸಕ್ಕೆ ಒದಗಿಸಿದ್ದ ಮೂವರು ಭದ್ರತಾ ಗಾರ್ಡ್ಸ್‌ಗಳು ಹಾಗೂ ಬಿಜೆಪಿಯಿಂದ ಉಚ್ಛಾಟಿಸಲ್ಪಟ್ಟ ಮಾಜಿ ಸಚಿವ ಈಶ್ವರಪ್ಪ ಅವರ ಮನೆಗೆ ನೀಡಿದ್ದ ಭದ್ರತಾ ಗಾರ್ಡ್‌ಹಾಗೂ ಬೆಂಗಾವಲು ಭದ್ರತಗಳನ್ನು ಗೃಹ ಇಲಾಖೆ ವಾಪಸ್ ಪಡೆದುಕೊಂಡಿದೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ನನ್ನ ನಿವಾಸದ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸ್ ಸಿಬ್ಬಂದಿಯನ್ನು ವಾಪಸ್ ಪಡೆದು, ನನ್ನ ಮೇಲೆ ಕಾಂಗ್ರೆಸ್ ಸರ್ಕಾರ ಉದ್ದೇಶಪೂರ್ವಕವಾಗಿ ರಾಜಕಾರಣ ಮಾಡುತ್ತಿದೆ. ಇದು ಸಂಪೂರ್ಣವಾಗಿ ಟಾರ್ಗೆಟ್ ರಾಜಕಾರಣದ ಭಾಗವಾಗಿದ್ದು, ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾದ ನಡೆಯಾಗಿದೆ ಎಂದು ಕಿಡಿಕಾರಿದರು. ಇನ್ನು ನಮ್ಮ ಮನೆಗೆ ಬೆಂಗಾವಲು ರಕ್ಷಕರನ್ನು ಕೊಟ್ಟಿದ್ದರು. ಭದ್ರತಾ ದೃಷ್ಟಿಯಿಂದ ಕೊಡಲೇ ಬೇಕು. ಆದರೆ ಮೂವರು ಭದ್ರತಾ ಸಿಬ್ಬಂದಿಯನ್ನು ವಾಪಸ್ ಪಡೆದಿದ್ದಾರೆ. ಇದರ ಹಿಂದೆ ಪ್ರಿಯಾಂಕ್ ಖರ್ಗೆ ಇದ್ದಾರೆ. ನನಗೆ ಏನಾದರೂ ಆದರೆ ಸರ್ಕಾರ ಎಷ್ಟು ಹೊಣೆಯೋ, ಪ್ರಿಯಾಂಕ್ ಖರ್ಗೆ ಕುಟುಂಬವೂ ಕೂಡ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ನಾನು ವಿಪಕ್ಷ ನಾಯಕನಾಗಿ ಒಂದೂವರೆ ವರ್ಷ ಆಗುತ್ತಿದೆ. ಇಲ್ಲಿವರೆಗೂ ಸರ್ಕಾರಿ ಗೃಹ ಕೊಟ್ಟಿಲ್ಲ. ಇದೇ ಸ್ಥಾನದಲ್ಲಿ ಸಿದ್ದರಾಮಯ್ಯ ಇದ್ದಾಗ ಜಗಳ ಮಾಡಿ ಮನೆ ತೆಗೆದುಕೊಂಡಿದ್ದರು. ಬೆಂಗಾವಲು ರಕ್ಷಕರನ್ನು ವಾಪಸ್ ಪಡೆಯಲು ಯಾರು ಕಾರಣರೆಂದು ಮುಖ್ಯಮಂತ್ರಿ, ಗೃಹ ಸಚಿವರು ಉತ್ತರಿಸಬೇಕು. ಇಲ್ಲವಾದರೆ ನನಗೆ ಕೊಟ್ಟ ಕಾರು ಮತ್ತಿತರ ಸೌಲಭ್ಯವನ್ನು ವಾಪಸ್ ಕೊಡುವೆ. ಉಳಿದ ಅಂಗರಕ್ಷಕರನ್ನೂ ವಾಪಸ್ ಕಳಿಸುವೆ. ನನಗೆ ಯಾವ ರಕ್ಷಣೆಯೂ ಬೇಕಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಮುಂದುವರೆದು ಮಾತನಾಡಿದ ಅವರು, ನಾನು ಇಂತಹ ಬೆದರಿಕೆಗಳಿಗೂ, ಒತ್ತಡಗಳಿಗೂ ಹೆದರುವವನಲ್ಲ, ಬೆದರುವವನಲ್ಲ. ಇಂತಹ ಸಂವಿಧಾನ ವಿರೋಧಿ ನಡೆಗಳಿಂದ ನನ್ನ ಛಲ ಯಾವತ್ತೂ ಕುಂದುವುದಿಲ್ಲ. ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ಅನ್ಯಾಯ ಮತ್ತು ಜನವಿರೋಧಿ ನೀತಿಗಳ ವಿರುದ್ಧ ನನ್ನ ಹೋರಾಟ ಅಚಲ ಮತ್ತು ನಿರಂತರವಾಗಿರುತ್ತದೆ. ನನ್ನ ಧ್ಯೇಯ – ಜನಹಿತ, ಸಾಮಾಜಿಕ ನ್ಯಾಯ ಮತ್ತು ಸತ್ಯಕ್ಕಾಗಿ ಹೋರಾಟ. ನನ್ನನ್ನು ಕಟ್ಟಿಹಾಕಬೇಕೆಂಬ ಕಾಂಗ್ರೆಸ್ ಸರ್ಕಾರದ ಕಸರತ್ತು ಹಗಲುಗನಸಷ್ಟೇ; ಅದು ಯಾವತ್ತೂ ನನಸಾಗುವುದಿಲ್ಲ ಎಂದರು. ಪ್ರಿಯಾಂಕ್ ಖರ್ಗೆಯವರಿಗೆ ಸಾಮಾನ್ಯ ಜ್ಞಾನದ ಕೊರತೆ ಇದೆ. ಪುಸ್ತಕ ಓದಿ ಮಾತನಾಡುತ್ತಾರೆ. ಸಮಯ ಇದೆ; ಮಾಡಲು ಬೇರೆ ಕೆಲಸ ಇಲ್ಲ; ಇಲಾಖೆ ಬಗ್ಗೆ ಕೆಲಸ ಮಾಡುವ ಉದ್ದೇಶ ಇಲ್ಲ. ನಾವೆಲ್ಲ ದಲಿತ ಸಂಘರ್ಷ ಸಮಿತಿ ಮೂಲಕ ಹೋರಾಟ ಮಾಡಿ ಬಂದವರು.ನೀವೆಲ್ಲ ಚಿನ್ನದ ಸ್ಪೂನ್ ಇಟ್ಟುಕೊಂಡು ಹುಟ್ಟಿದವರು. ದಲಿತತ್ವವೇ ಗೊತ್ತಿರದವರು. ನೀವು ದಲಿತರ ಬಗ್ಗೆ ಮೊಸಳೆಕಣ್ಣೀರು ಹಾಕುವುದು ಬೇಕಿಲ್ಲ ಎಂದು ತಿಳಿಸಿದರು.