ನಾವಿಬ್ರು ಬ್ರದರ್ಸ್, ಹೈಕಮಾಂಡ್ ಹೇಳಿದಾಗ ಡಿ.ಕೆ.ಶಿವಕುಮಾರ್ ಸಿಎಂ : ಸಿದ್ದರಾಮಯ್ಯ

ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಕುರ್ಚಿ ಕದನ ಜೋರಾದ ಬೆನ್ನಲ್ಲೇ ಹೈಕಮಾಂಡ್ ಸೂಚನೆಯ ಮೇರೆಗೆ ಸಿಎಂ ಸಿದ್ದರಾಮಯ್ಯ ಮನೆಯಲ್ಲಿ ಬ್ರೇಕ್‌ಫಾಸ್ಟ್‌ ಮೀಟಿಂಗ್‌ ಮಾಡಿ ಒಗ್ಗಟ್ಟು ಪ್ರದರ್ಶಿಸಿದ್ದರು. ಆ ಬಳಿಕ ಸಿದ್ದರಾಮಯ್ಯ ಅವರನ್ನು ಉಪಾಹಾರಕ್ಕೆ ಮನೆಗೆ ಬರುವಂತೆ ಡಿಕೆ ಶಿವಕುಮಾರ್ ಆಹ್ವಾನಿಸಿದ್ದರು. ಅದರಂತೆ ಇಂದು ಡಿ.ಕೆ.ಶಿವಕುಮಾರ್ ಅವರ ಸದಾಶಿವ ನಗರ ನಿವಾಸದಲ್ಲಿ ಉಭಯ ನಾಯಕರು ಬ್ರೇಕ್​ಫಾಸ್ಟ್ ಮೀಟಿಂಗ್ ಮಾಡಿದ್ದಾರೆ. ಡಿಕೆಶಿ ನಿವಾಸದಲ್ಲಿ ಸಿದ್ದರಾಮಯ್ಯ ನಾಟಿ ಕೋಳಿ ಸಾರು, ಇಡ್ಲಿ ಸವಿದಿದ್ದಾರೆ.

ಬ್ರೇಕ್‌ಫಾಸ್ಟ್‌ ಮೀಟಿಂಗ್‌ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಹಾರ ಸಭೆಯಲ್ಲಿ ಪಕ್ಷ ಹಾಗೂ ಸರ್ಕಾರದ ವಿಚಾರ ಕುರಿತು ಚರ್ಚೆ ಮಾಡಿದ್ದೇವೆ. ಡಿಸೆಂಬರ್ 8 ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಪ್ರಾರಂಭವಾಗಲಿರುವ ಹಿನ್ನೆಲೆಯಲ್ಲಿ ಸಭೆ ನಡೆಸಿದ್ದು, ವಿಪಕ್ಷಗಳು ಯಾವುದೇ ವಿಚಾರ ಪ್ರಸ್ತಾಪಿಸಿದ್ರೂ ಎದುರಿಸುತ್ತೇವೆ ಎಂದರು.

ನಾನು ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಬ್ರದರ್ಸ್, ಇಬ್ಬರದು ಒಂದೇ ಪಕ್ಷ, ಒಂದೇ ಸಿದ್ದಾಂತ. ನಾವು ಯಾವಾಗಲೂ ಒಟ್ಟಾಗಿ ಇದ್ದೇವೆ. ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಉಪಹಾರಕ್ಕೆ ಕರೆದಾಗ ಹಳ್ಳಿಯಿಂದ ನಾಟಿ ಕೋಳಿ ತರುವಂತೆ ಹೇಳಿದ್ದಂತೆ ಅದರಂತೆ ನಾಟಿ ಕೋಳಿ ಸವಿದಿದ್ದೇನೆ. ನಾನು ನಾನ್ ವೆಜ್. ಅವರು ವೆಜ್. ರಾಹುಲ್ ಗಾಂಧಿ ಹೇಳಿದಂತೆ ನಡೆದುಕೊಳ್ಳಬೇಕು. ಪಕ್ಷ ಹಾಗೂ ಸರ್ಕಾರದಲ್ಲಿ ಯಾವುದೇ ಭಿನ್ನಮತವಿಲ್ಲ. ಎಲ್ಲಾ ಶಾಸಕರು ಒಗ್ಗಟ್ಟಾಗಿದ್ದೇವೆ, ಭವಿಷ್ಯದಲ್ಲೂ ಒಗ್ಗಟ್ಟಾಗಿ ಇರ್ತೀವಿ. ಅಧಿವೇಶನದ ಸಂದರ್ಭದಲ್ಲಿ ಎಲ್ಲಾ ಶಾಸಕರು ಒಗ್ಗಟ್ಟಾಗಿ ವಿಪಕ್ಷವನ್ನು ಎದುರಿಸುತ್ತೇವೆ ಎಂದರು.

ಇನ್ನು ಹೈಕಮಾಂಡ್ ತೀರ್ಮಾನದಂತೆ ಸಂಪುಟ ವಿಸ್ತರಣೆ ಮಾಡುತ್ತೇವೆ. ಸಂಪುಟ ವಿಸ್ತರಣೆ ಬಗ್ಗೆ ಮೊನ್ನೆಯೇ ತೀರ್ಮಾನ ಆಗಿದೆ. ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳುತ್ತೇವೆ. ರಾಹುಲ್ ಗಾಂಧಿ ಹೇಳಿದಂತೆ ನಡೆದುಕೊಳ್ಳಬೇಕು. ನಾಳೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಮಂಗಳೂರಿಗೆ ಭೇಟಿ ನೀಡುತ್ತಿದ್ದು, ಅವರನ್ನು ಭೇಟಿಯಾಗುತ್ತೆ. ಹೈಕಮಾಂಡ್ ಯಾವಾಗಲೂ ಕರೆದರೂ ಹೋಗುತ್ತೇವೆ ಎಂದರು.

ಹೈಕಮಾಂಡ್ ಹೇಳಿದಾಗ ಡಿಕೆ ಸಿಎಂ..!
ಈ ನಡುವೆ ಡಿ.ಕೆ.ಶಿವಕುಮಾರ್ ಯಾವಾಗ ಸಿಎಂ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಹೈಕಮಾಂಡ್ ಹೇಳಿದಾಗ ಎಂದರು. ಬಳಿಕ ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿ, ಉಪಹಾರ ಸಭೆಗೆ ಮೊದಲು ನಾನೇ ಸಿಎಂ ಅವರನ್ನು ಆಹ್ವಾನಿಸಿದೆ. ಆದರೆ, ಅವರ ಮನೆಯಲ್ಲಿ ಮೊದಲ ಉಪಹಾರ ಸಭೆ ನಡೆಯಿತು. ಇಂದಿನ ಸಭೆಯಲ್ಲಿ ಪಕ್ಷ, ಸರ್ಕಾರ ಹಾಗೂ ಅಧಿವೇಶನದ ಬಗ್ಗೆ ಚರ್ಚೆ ನಡೆದಿದೆ. ಉತ್ತಮ ಆಡಳಿತ ನೀಡಲು ಹಾಗೂ ನಮ್ಮ ರಾಜ್ಯದ ನಿರಂತರ ಅಭಿವೃದ್ಧಿಗೆ ಬದ್ಧರಾಗಿದ್ದೇವೆ ಎಂದು ಪುನರುಚ್ಚರಿಸುತ್ತೇವೆ. ಡಿಸೆಂಬರ್ 8 ರಂದು ದೆಹಲಿಗೆ ಹೋಗುತ್ತೇವೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *