ರಾಮನಗರ : ಬಜೆಟ್ ಅಧಿವೇಶನ ಮುಗಿದ ಬಳಿಕ ಸಿಎಂ ಬದಲಾಗ್ತಾರೆ ಅನ್ನೋ ಚರ್ಚೆ ಜೋರಾಗಿರುವ ಹೊತ್ತಲ್ಲೇ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಹೊಸ ಬಾಂಬ್ ಸಿಡಿಸಿದ್ದಾರೆ. ಮುಖ್ಯಮಂತ್ರಿ ಹುದ್ದೆ ವಿಚಾರವಾಗಿ ಯುಗಾದಿ ನಂತರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸಿಹಿ ಸುದ್ದಿ ಸಿಗುವ ವಿಶ್ವಾಸವಿದೆ ಎಂದು ಇಕ್ಬಾಲ್ ಹುಸೇನ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಅವರು 6 ವರ್ಷಗಳನ್ನು ಪೂರೈಸಿರುವುದು ಸಂತಸ ತಂದಿದೆ. ನಮ್ಮ ನಾಯಕರ ನೇತೃತ್ವದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರ ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಅವರಿಗೆ ಭವಿಷ್ಯವಿದ್ದು ಯುಗಾದಿ ನಂತರ ದೇವರು ಅವರಿಗೆ ಸಿಹಿಸುದ್ದಿ ಕೊಡುತ್ತಾನೆ ಎಂದರು.
ಸಿದ್ದರಾಮಯ್ಯ ಬಜೆಟ್ನಿಂದ ನಿರಾಸೆಯಾಗಿದೆ..!
ಕ್ಷೇತ್ರದ ಹಲವು ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೆ. ಆದರೆ, ಈ ಸಾಲಿನ ಬಜೆಟ್ ನಲ್ಲಿ ಅನುದಾನ ನೀಡದಿರುವುದು ನನಗೆ ಬಹಳ ನಿರಾಸೆಯಾಗಿದೆ.
ಕೃಷಿ, ರೇಷ್ಮೆ ಇಲಾಖೆ, ಪ್ರವಾಸೋದ್ಯಮ ಅಭಿವೃದ್ಧಿ ಸೇರಿದಂತೆ ಭಕ್ಷಿಕೆರೆ ಹೊಡದು ಸೀರಳ್ಳ ನೆರೆಯಿಂದ ಉಂಟಾದ ಅನಾಹುತಗಳನ್ನು ಸರಿಪಡಿಸಲು ಅನುದಾನ ಕೊಡುವಂತೆ ನಾನೇ ಖುದ್ಧಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚೆ ಮಾಡಿದ್ದೆ. ಅವರು ಚಿಂತನೆ ನಡೆಸಿ ರಾಮನಗರಕ್ಕೆ ಅನುದಾನ ನೀಡುತ್ತಾರೆ ಎಂಬ ವಿಶ್ವಾಸ, ನಂಬಿಕೆ ಇಟ್ಟಿದ್ದೆ. ಆದರೆ, ಬಜೆಟ್ನಲ್ಲಿ ಅದು ಸಾಕಾರವಾಗದಿರುವುದು ಬೇಸರ ತರಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನೂ ಜಿಲ್ಲೆಯ ಕನಕಪುರ, ರಾಮನಗರ, ಚನ್ನಪಟ್ಟಣ, ಮಾಗಡಿ ತಾಲ್ಲೂಕುಗಳು ಬೆಂಗಳೂರಿಗೆ ಸಮೀಪವಿದ್ದು, ಒಂದು ದಿನದ ಪ್ರವಾಸಿ ಸರ್ಕ್ಯೂಟ್ ಮಾಡಲು ಸಂಗಮ, ರೇವಣಸಿದ್ದೇಶ್ವರ ಬೆಟ್ಟ, ಜಾನಪದ ಲೋಕ, ಕಣ್ವ ಜಲಾಶಯ, ರಾಮದೇವರ ಬೆಟ್ಟ, ಸಾವನದುರ್ಗ, ಮಂಚನಬೆಲೆ ಜಲಾಶಯಗಳಂತಹ ಹಲವು ಇತಿಹಾಸವಿರುವ ತಾಣಗಳು ಪ್ರವಾಸಿಗರಿಗೆ ಹೇಳಿ ಮಾಡಿಸಿದಂತಿವೆ. ಈ ಸಾಲಿನ ಬಜೆಟ್ನಲ್ಲಿ ಪ್ರವಾಸೋದ್ಯಮಕ್ಕೆ ಒತ್ತು ನೀಡುವಂತೆ ಸಾಕಷ್ಟು ಬಾರಿ ಮನವಿ ಮಾಡಿದ್ದೆ. ಅದು ಕೂಡ ಸಾಕಾರವಾಗಿಲ್ಲ. ಅದಕ್ಕೆ ಆದ್ಯತೆ ಕೊಟ್ಟಿದ್ದರೆ ಪ್ರವಾಸಿ ತಾಣಗಳ ಅಭಿವೃದ್ದಿ ಜೊತೆಗೆ ರೆವಿನ್ಯೂ ಸಹ ಬರುತ್ತಿತ್ತು ಎಂದು ಇಕ್ಬಾಲ್ ಹುಸೇನ್ ಹೇಳಿದರು.