ಸಿಎಂ ರೇಸ್‌ನಿಂದ ಹಿಂದೆ ಸರಿದ್ರಾ ಡಿಕೆಶಿ?; ಹೀಗಂದಿದ್ಯಾಕೆ ಡಿ.ಕೆ.ಸುರೇಶ್?

ಬೆಂಗಳೂರು : ಸಿದ್ದರಾಮಯ್ಯ ಎಷ್ಟು ದಿನ‌ ಮುಖ್ಯಮಂತ್ರಿ ಆಗಿರ್ತಾರೋ ಅಷ್ಟು ದಿನವೂ ಅವರೇ ನಮ್ಮ ಮುಖ್ಯಮಂತ್ರಿ. ಸಿಎಂ ಬದಲಾವಣೆ ಅನ್ನೋದು ಕೇವಲ ಊಹಾಪೋಹ! ಮುಂದಕ್ಕೂ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಇರಬಹುದು!? ನಮ್ಮಲ್ಲಿ ನಾಯಕತ್ವ ಗಟ್ಟಿಯಾಗಿದೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿಕೆ ನೀಡಿದ್ದಾರೆ.

ನಾಯಕತ್ವ ಬದಲಾವಣೆ, ಅಧಿಕಾರ ಹಸ್ತಾಂತರ ವಿಚಾರವಾಗಿ ನಡೆಯುತ್ತಿರುವ ಚರ್ಚೆ ಬಗ್ಗೆ ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಡಿ.ಕೆ. ಸುರೇಶ್‌, ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿರುವ ವಿಚಾರಗಳು ಪಕ್ಷದ ಮುಂದೆ ಇಲ್ಲ! ಸಿದ್ದರಾಮಯ್ಯ ಅವರಿಗೆ ಇನ್ನು ವಯಸ್ಸಾಗಿಲ್ಲ! ಮುಂದಿನ ದಿನಗಳಲ್ಲಿ ಬರುವ ಎಲ್ಲಾ ಚುನಾವಣೆಗಳು ಅವರ ನೇತೃತ್ವದಲ್ಲೇ ನಡೆಯಲಿವೆ ಎಂದರು.

ಇದನ್ನೂ ಓದಿ : ‘ನವೆಂಬರ್ 14ಕ್ಕೆ ಮುಹೂರ್ತ ಫಿಕ್ಸ್, ಡಿಕೆಶಿಯೇ ನೆಕ್ಸ್ಟ್ ಸಿಎಂ..!’

ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಅವರಿಗೆ ಪರ್ಯಾಯ ನಾಯಕರು ಇಲ್ಲವಾ? ಎಂದು ಕೇಳಿದಾಗ, ಎಲ್ಲಾ ನಾಯಕರೂ ಸೇರಿ ಕಾಂಗ್ರೆಸ್ ಪಕ್ಷವಾಗಿದೆ. ಸಿದ್ದರಾಮಯ್ಯ ಅಥವಾ ಡಿ.ಕೆ. ಶಿವಕುಮಾರ್ ಅವರಿಂದ ಮಾತ್ರ ಪಕ್ಷವಿಲ್ಲ. ಎಂ.ಬಿ ಪಾಟೀಲ್, ಪರಮೇಶ್ವರ್, ಸತೀಶ್ ಜಾರಕಿಹೋಳಿ, ಮಹದೇವಪ್ಪ ಸೇರಿದಂತೆ ಎಲ್ಲಾ ಸಮುದಾದ ನಾಯಕರು ಸೇರಿ ಪಕ್ಷ ಕಟ್ಟಿಕೊಂಡು ಬಂದಿದ್ದೇವೆ! ಎಂದರು.

ಇನ್ನು ಕಾಂಗ್ರೆಸ್ ಕಚೇರಿಗಳ ಶಂಕುಸ್ಥಾಪನೆ ವಿಚಾರಾಗಿ ರಾಹುಲ್ ಗಾಂಧಿ ಅವನ್ನು ಭೇಟಿ ಮಾಡುವ ಸಾಧ್ಯತೆ ಇದೆಯೇ? ಎಂದು ಕೇಳಿದಾಗ, ಆ ವಿಚಾರವಾಗಿ ನನಗೆ ಮಾಹಿತಿ ಇಲ್ಲ. ಅವರು ಸಮಯ ನಿಗದಿ ಮಾಡಿದ ಬಳಿಕ ಶಂಕುಸ್ಥಾಪನೆ ಕಾರ್ಯಕ್ರಮ ನಡೆಯಲಿದೆ. ಎಐಸಿಸಿ ಅಧ್ಯಕ್ಷರು ಹಾಗೂ ರಾಹುಲ್ ಗಾಂಧಿ ಅವರನ್ನು ಕರೆದು ಒಂದೇ ಸ್ಥಳದಲ್ಲಿ ಎಲ್ಲಾ ಕಡೆ ಶಂಕುಸ್ಥಾಪನೆ ನೆರವೇರಿಸುವ ಕಾರ್ಯ ಮಾಡುವ ಆಲೋಚನೆ ಇದೆ ಎಂದು ತಿಳಿಸಿದರು.

ದೆಹಲಿ ಕಡೆ ಬರ್ಬೇಡಿ ಎಂದ್ರಾ? ಹೈಕಮಾಂಡ್..!

ರಾಜ್ಯ ನಾಯಕರು ಸಧ್ಯಕ್ಕೆ ದೆಹಲಿ ಕಡೆ ಬರಬೇಡಿ ಎಂಬ ಹೈಕಮಾಂಡ್ ಸಂದೇಶ ರವಾನಿಸಿದೆಯೇ? ಎಂಬ ಪ್ರಶ್ನೆಗೆ, ನಾನು ಅಷ್ಟು ದೊಡ್ಡ ನಾಯಕನಲ್ಲ. ನನಗೆ ಬೇಕಾದಾಗ ಹೋಗಿ ಬರುತ್ತೇನೆ ಎಂದು ತಿಳಿಸಿದರು. ಅಲ್ಲದೆ, ಶಿವಕುಮಾರ್ ಅವರು ಸಿಎಂ ರೇಸ್ ನಿಂದ ಹಿಂದೆ ಸರಿದಿದ್ದಾರಾ? ಎಂದು ಕೇಳಿದಾಗ. ಆ ವಿಚಾರಗಳು ಇಲ್ಲಿ ಪ್ರಸ್ತಾಪವಿಲ್ಲ. ಈಗ ನಾಯಕತ್ವ ಗಟ್ಟಿಯಾಗಿದೆ ಎಂದು ಡಿಕೆ ಸುರೇಶ್‌ ಅವರು ತಿಳಿಸಿದರು.

ಇನ್ನು ಮೇಕೆದಾಟು ಯೋಜನೆ ಸಂಬಂಧ ನ್ಯಾಯಾಲಯದಲ್ಲಿ ಗುರುವಾರ ವಿಚಾರಣೆ ನಡೆಯಲಿದೆ. ಈ ವಿಚಾರವಾಗಿ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿಗಳು ವಿಶೇಷ ಪೀಠ ರಚಿಸಿರುವಂತೆ ಕಾಣಿಸುತ್ತದೆ. ಈ ವಿಚಾರಣೆ ವೇಳೆ ನಮ್ಮ ನಿಲುವು ಏನಿರಬೇಕು? ಎಂಬುದರ ಬಗ್ಗೆ ಅಧಿಕಾರಿಗಳು ಮತ್ತು ವಕೀಲರ ಜೊತೆ ಚರ್ಚೆ ನಡೆಸಲು ಡಿಸಿಎಂ ಡಿಕೆ ಶಿವಕುಮಾರ್‌ ಅವರು ದೆಹಲಿಗೆ ತೆರಳಿದ್ದಾರೆ ಎಂದರು.

ಇನ್ನು ವರಿಷ್ಠರೂ ದೆಹಲಿಯಲ್ಲಿರುವ ಕಾರಣ ಈ ಪ್ರವಾಸದ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ ಎಂದು ಕೇಳಿದಾಗ, ವರಿಷ್ಠರು ದೆಹಲಿಯಲ್ಲಿ ಇರದೇ ಎಲ್ಲಿ ಹೋಗುತ್ತಾರೆ? ಬಿಹಾರ ಚುನಾವಣೆಗೂ ಇದಕ್ಕೂ ಸಂಬಂಧ ವಿಲ್ಲ. ಶಿವಕುಮಾರ್ ಅವರು ಈ ಹಿಂದಿನಿಂದಲೂ ದೆಹಲಿಗೆ ಹೋದಾಗೆಲ್ಲಾ ಕಾಂಗ್ರೆಸ್ ಕಚೇರಿಗೆ ಹೋಗುತ್ತಾರೆ, ವರಿಷ್ಠರು ಸಿಕ್ಕರೆ ಮಾತನಾಡುತ್ತಾರೆ, ಬರುತ್ತಾರೆ ಎಂದು ಸ್ಪಷ್ಟನೆ ನೀಡಿದ್ರು.

Leave a Reply

Your email address will not be published. Required fields are marked *