ವಿಜಯನಗರ : ರಾಜ್ಯ ರಾಜಕಾರಣದಲ್ಲಿ ಅಧಿಕಾರ ಬದಲಾವಣೆಯ ಚರ್ಚೆ ಜೋರಾಗಿ ನಡೆಯುತ್ತಿರುವ ಹೊತ್ತಲ್ಲೇ ಮಾಜಿ ಸಚಿವ ಬಿ.ಶ್ರೀರಾಮುಲು ಹೊಸ ಬಾಂಬ್ ಸಿಡಿಸಿದ್ದಾರೆ. ಬೆಳಗಾವಿ ಅಧಿವೇಶನದ ವೇಳೆಗೆ ಮುಖ್ಯಮಂತ್ರಿ ಬದಲಾವಣೆಯಾಗಲಿದೆ. ಆದರೆ ಡಿ.ಕೆ.ಶಿವಕುಮಾರ್ ಅಂತೂ ಮುಖ್ಯಮಂತ್ರಿ ಆಗೋದಿಲ್ಲ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವೆಂಬರ್ ಕ್ರಾಂತಿ ನಡೆಯಲಿದೆ. ಡಿ.ಕೆ.ಶಿವಕುಮಾರ್ ಅವರಂತೂ ಮುಖ್ಯಮಂತ್ರಿ ಆಗುವುದಿಲ್ಲ. ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಸ್ಥಾನದೊಂದಿಗೆ ಉಪ ಮುಖ್ಯಮಂತ್ರಿಯಾಗಿದ್ದಾರೆ. ನಾಲ್ಕೈದು ಖಾತೆಗಳೊಂದಿಗೆ ಬೆಂಗಳೂರನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಡಿಕೆಶಿಗೆ ಬಹಳ ಜವಾಬ್ದಾರಿಗಳಿದ್ದು, ಅವುಗಳನ್ನೇ ಮುಂದುವರಿಸಿಕೊಂಡು ಹೋಗಲಿದ್ದಾರೆ ಎಂದರು.
ಇದನ್ನೂ ಓದಿ : Power sharing: ಗ್ರಾಮ ಪಂಚಾಯ್ತಿಗಳಂತೆ ಸಿದ್ದು-ಡಿಕೆಶಿ ನಡುವೆ ಜಂಟಲ್‌ಮ್ಯಾನ್ ಅಗ್ರೀಮೆಂಟ್ ಆಗಿದೆ
ಇನ್ನು ಡಿಕೆಶಿ 2028ರ ತನಕ ಮುಖ್ಯಮಂತ್ರಿ ಆಗುವುದಿಲ್ಲ. ಮೂರನೇ ವ್ಯಕ್ತಿ ಮುಖ್ಯಮಂತ್ರಿಯಾಗಲಿದ್ದಾರೆ ಯಾರು ಎಂಬ ಪ್ರಶ್ನೆಗೆ ಮಾತ್ರ ಶ್ರೀರಾಮುಲು ಉತ್ತರ ಕೊಟ್ಟಿಲ್ಲ. ಎಸ್ಟಿ ಸಮುದಾಯದವರು ಮುಖ್ಯಮಂತ್ರಿಯಾದ್ರೇ ಸಂತೋಷ ಪಡ್ತೇನೆ. ಸತೀಶ್ ಜಾರಕಿಹೊಳಿ ಅವರು ಹಿಂದಿನಿಂದಲೂ ಅಹಿಂದ ನಾಯಕರು. ಸತೀಶ್ ಅವರಿಗೆ ಅವಕಾಶ ಮಾಡಿಕೊಡುವ ಬಗ್ಗೆ ಸ್ವತಃ ಮುಖ್ಯಮಂತ್ರಿ ಅವರ ಪುತ್ರ ಹೇಳಿದ್ದಾರೆ. ನವೆಂಬರ್ ಕ್ರಾಂತಿಯಿಂದ ಸರ್ಕಾರ ಬಿದ್ದರೆ ಮಧ್ಯಂತರ ಚುನಾವಣೆಗೆ ಬಿಜೆಪಿ ಸಿದ್ಧವಿದೆ ಎಂದು ಶ್ರೀರಾಮುಲು ಹೇಳಿದರು.
ಗ್ಯಾರಂಟಿಗಳನ್ನ ಕೊಡ್ತಿರೋ ಸರ್ಕಾರವೇ ಉಳಿಯುವ ಗ್ಯಾರಂಟಿ ಇಲ್ಲ..!
ರಾಜ್ಯ ಕಾಂಗ್ರೆಸ್ ಸರ್ಕಾರದ ಪ್ರತಿ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದ್ದು, ರಾಜ್ಯದ ಜನತೆ ಸರ್ಕಾರದ ಬಗ್ಗೆ ವಿಶ್ವಾಸ ಕಳೆದುಕೊಂಡಿದ್ದಾರೆ. ಮುಂದೆ ಸರ್ಕಾರ ಉಳಿಯುವ ಗ್ಯಾರಂಟಿ ಇಲ್ಲ ಎಂದು ಭವಿಷ್ಯ ನುಡಿದರು. ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ದಿನಕ್ಕೊಂದು ಹೇಳಿಕೆ ನೀಡುತ್ತಾ ಜನರ ದಿಕ್ಕು ತಪ್ಪಿಸುತ್ತಿದ್ದು, ಸರ್ಕಾರದ ಬಗ್ಗೆ ಜನರು ವಿಶ್ವಾಸ ಕಳೆದುಕೊಂಡಿದ್ದಾರೆ ಎಂದರು. ಸಚಿವರು ಸ್ಥಾನಗಳನ್ನು ಬದಲಾವಣೆ ಮಾಡಿ ಎನ್ನುತ್ತಿದ್ದು, ಯಾರು ಕಪ್ಪ ಹಣ ಕೊಡುತ್ತಾರೆ, ಅವರನ್ನು ಮಾತ್ರ ಉಳಿಸುವ ಪ್ರಯತ್ನ ನಡೆಸಿ, ಇನ್ನುಳಿದವರಿಗೆ ಗೇಟ್‌ಪಾಸ್ ನೀಡುತ್ತಿದ್ದಾರೆ. ರಾಜ್ಯ ಸರ್ಕಾರದ ಪರಿಸ್ಥಿತಿ ಐಪಿಎಲ್ ಬೆಟ್ಟಿಂಗ್‌ನಂತಾಗಿದೆ ಎಂದು ಲೇವಡಿ ಮಾಡಿದರು.
ದೇಶಾದ್ಯಂತ ಮಹರ್ಷಿ ವಾಲ್ಮೀಕಿ ಜಯಂತಿ ನಡೆಯುತ್ತಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲೂ ಭ್ರಷ್ಟಾಚಾರ ನಡೆದಿದೆ. ನಿಗಮದ ಹಣವನ್ನು ತೆಲಂಗಾಣಕ್ಕೆ ಕಳಿಸಿದ್ದಾರೆ. ಇದಕ್ಕೆಲ್ಲ ನೇರ ಹೊಣೆ ಸಿಎಂ ಸಿದ್ದರಾಮಯ್ಯ ಹಾಗೂ ರಾಹುಲ್ ಗಾಂಧಿ ಎಂದು ಆಕ್ರೋಶ ವ್ಯಕ್ತಡಿಸಿದರು. ಸುಮಾರು ನೂರು ವರ್ಷದಿಂದ ದೇಶಸೇವೆ ಮಾಡುತ್ತಿರುವ ಆರ್‌ಎಸ್‌ಎಸ್ ನಿಷೇಧಿಸುವುದು ಯಾರಿಂದಲೂ ಸಾಧ್ಯವಿಲ್ಲ. ದೇಶಸೇವೆ, ಜನಸೇವೆ, ದೇಶಭಕ್ತಿ ಬೆಳೆಸುವ ಸಂಘವಾಗಿದ್ದು, ಆರ್‌ಎಸ್‌ಎಸ್ ಏನಾದರೂ ತಪ್ಪು ಮಾಡಿದ್ದರೆ ತೋರಿಸಿ. ಬಳಿಕ ನಿಷೇಧಿಸುವ ವಿಚಾರ ಮಾಡಿ ಎಂದು ಸವಾಲು ಹಾಕಿದರು.