ನವದೆಹಲಿ : ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಅಕ್ರಮ ನಡೆದಿದೆ! 25 ಲಕ್ಷ ನಕಲಿ ಮತದಾರರನ್ನು ಸೇರ್ಪಡೆ ಮಾಡಲಾಗಿದೆ. ಇದರಲ್ಲಿ ಬ್ರೆಜಿಲ್ ಮಾಡೆಲ್ ಒಬ್ಬರ ಫೋಟೋ ಕೂಡಾ ಇದೆ! ಚುನಾವಣಾ ಆಯೋಗ-ಬಿಜೆಪಿ ಸೇರಿಕೊಂಡು ಅಭೂತಪೂರ್ವ ಗೆಲುವು ಸಾಧಿಸಬೇಕಿದ್ದ ಕಾಂಗ್ರೆಸ್ ಅನ್ನು ಸೋಲಿಸಿವೆ. ಹರ್ಯಾಣದಲ್ಲಿ ನಡೆದಿರೋದು ನಕಲಿ ಚುನಾವಣೆ, ಅಲ್ಲಿ ಈಗ ಅಧಿಕಾರದಲ್ಲಿರೋದೂ ನಕಲಿ ಸರ್ಕಾರ ಎಂದು ವಿಪಕ್ಷನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.
ಎಐಸಿಸಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯ ಚುನಾವಣಾಧಿಕಾರಿ ಜ್ಞಾನೇಶ್ ಕುಮಾರ್ ಹಾಗೂ ಇತರೆ ಇಬ್ಬರು ಚುನಾವಣಾ ಅಧಿಕಾರಿಗಳು ಬಿಜೆಪಿ ಜೊತೆಗೆ ಸೇರಿಕೊಂಡು ಬಿಜೆಪಿಗೆ ಹರ್ಯಾಣದಲ್ಲಿ ಭಾರೀ ಬಹುಮತ ಸಿಗುವಂತೆ ಮಾಡಿದ್ದಾರೆ! ಅವರು ಪ್ರಧಾನಿ ಮೋದಿ ಅವರ ಜೊತೆ ಈ ಅಕ್ರಮದಲ್ಲಿ ಕೈಜೋಡಿಸಿದ್ದಾರೆ! ಎಂದು ಕಿಡಿಕಾರಿದರು.
ಕಳೆದ ವರ್ಷ ನಡೆದಿದ್ದ ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ 25 ಲಕ್ಷ ಮತಗಳ ಕಳವು ಆಗಿವೆ! 5.21 ಲಕ್ಷ ಡೂಪ್ಲಿಕೇಟ್ ಮತದಾರರು, 93,174 ನಕಲಿ ಮತದಾರರು ಮತ್ತು 19.26 ಲಕ್ಷ ಗುಂಪು ಮತದಾರರ ಮೂಲಕ ಈ ಕಳವು ನಡೆದಿದೆ. ಚುನಾವಣಾ ಆಯೋಗವು ಆಪರೇಷನ್ ಸರ್ಕಾರ್ ಚೋರಿ ಮೂಲಕ ಹರ್ಯಾಣದಲ್ಲಿ ಕಾಂಗ್ರೆಸ್‌ಗೆ ಸಿಗಬೇಕಿದ್ದ ಅಭೂತಪೂರ್ವ ಗೆಲುವನ್ನು ಸೋಲಾಗಿ ಪರಿವರ್ತಿಸಿದೆ! ನನ್ನ ಆರೋಪಗಳಿಗೆ ಶೇ.100ರಷ್ಟು ಸಾಕ್ಷ್ಯಗಳಿವೆ! ಎಂದರು.
ಈ ಚುನಾವಣಾ ಆಯೋಗಕ್ಕೆ ನ್ಯಾಯಯುತ ಚುನಾವಣೆ ಬೇಕಿಲ್ಲ. ಆಯೋಗವು ಬಿಜೆಪಿಗೆ ನೆರವು ನೀಡಲು ಬಯಸುತ್ತದೆ. ಬೂತ್‌ಗಳಿಂದ ಮತದಾನದ ಸೀಸಿಟಿವಿ ದೃಶ್ಯಾವಳಿಗಳನ್ನು ಇದೇ ಕಾರಣಕ್ಕೆ ಅದು ಪಕ್ಷಗಳಿಗೆ ನೀಡುತ್ತಿಲ್ಲ, ಹರ್ಯಾಣ ಚುನಾವಣೆಗೂ ಮುನ್ನ 3.5 ಲಕ್ಷ ಮತದಾರರ ಹೆಸರು ಡಿಲೀಟ್ ಮಾಡಲಾಗಿದೆ? ಬಹುತೇಕ ಇವರೆಲ್ಲ ಕಾಂಗ್ರೆಸ್ ಬೆಂಬಲಿಗರೇ ಆಗಿರಬೇಕು? ಎಂದು ಆರೋಪ ಮಾಡಿದ್ರು.
‘ಎಲ್ಲಾ ಪ್ರಮುಖ 5 ಎಕ್ಸಿಟ್ ಪೋಲ್‌ಗಳು ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದಿದ್ದವು’. ‘ಆದರೆ ನಕಲಿ ಮತದಾರರ ಮೂಲಕ ಆ ಅಭೂತಪೂರ್ವ ಗೆಲುವನ್ನು ಸೋಲಾಗಿ ಬದಲಾಯಿಸಲಾಗಿದೆ! ಈ ‘ಹರಿಯಾಣ ಫೈಲ್ಸ್’ ಮೂಲಕ ಇಡೀ ರಾಜ್ಯವನ್ನೇ ಕಳವು ಮಾಡಲಾಗಿದೆ. ಹರ್ಯಾಣದಲ್ಲಿ ಆಪರೇಷನ್ ಸರ್ಕಾರ್ ಚೋರಿ ಯೋಜನೆ ಕಾರ್ಯಗತಗೊಳಿಸುವ ಮೂಲಕ ಕಾಂಗ್ರೆಸ್ ಕೈಯಿಯಿಂದ ಗೆಲುವು ಕಸಿಯಲಾಗಿದೆ! ಎಂದು ದೂರಿದರು.
ಹರಿಯಾಣ ವೋಟರ್ ಐಡಿಯಲ್ಲಿ ಬ್ರೆಜಿಲ್ ಮಾಡೆಲ್..!?
ಹರ್ಯಾಣದ ಮತದಾರರ ಪಟ್ಟಿಯಲ್ಲಿನ 25 ಲಕ್ಷ ನಕಲಿ ಮತದಾರರಲ್ಲಿ ಬ್ರೆಜಿಲ್‌ನ ರೂಪದರ್ಶಿಯ ಫೋಟೋ ಕೂಡ ಇದೆ! ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಬ್ರೆಜಿಲ್ ರೂಪದರ್ಶಿಯ ಫೋಟೋವನ್ನು 22 ಮತದಾರರ ಹೆಸರಿಗೆ ಲಗತ್ತಿಸಲಾಗಿದೆ! 10 ಬೇರೆ ಬೇರೆ ಬೂತ್‌ಗಳಲ್ಲಿ 22 ಬಾರಿ ಇವರು ಮತ ಚಲಾಯಿಸಿದ್ದಾರೆ! ಆಕೆಗೆ ಸೀಮಾ, ಸ್ವೀಟಿ, ಸರಸ್ವತಿ, ರಶ್ಮಿ ಮತ್ತು ವಿಮ್ಲಾ ಎಂಬ ವಿಭಿನ್ನ ಹೆಸರುಗಳೂ ಇವೆ ಎಂದು ರಾಹುಲ್ ಆರೋಪಿಸಿದರು. ಈ ಫೋಟೋದಲ್ಲಿರುವ ನೈಜ ಮಾಡೆಲ್ ಹೆಸರು ಮ್ಯಾಥ್ಯೂಸ್ ಫೆರ್ರೋ! ಎಂದು ಮಾಹಿತಿ ನೀಡಿದ್ರು.
ಇನ್ನು ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಮತಗಳವು ನಡೆಸಲಾಗಿದೆ ಎಂಬ ರಾಹುಲ್ ಗಾಂಧಿ ಆರೋಪವನ್ನು ಚುನಾವಣಾ ಆಯೋಗ ಸ್ಪಷ್ಟವಾಗಿ ತಳ್ಳಿಹಾಕಿವೆ. ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಬೂತ್ ಏಜೆಂಟರು ಯಾಕೆ? ಮತದಾರರ ಪಟ್ಟಿ ಹಾಗೂ ಒಂದಕ್ಕಿಂತ ಹೆಚ್ಚಿನ ಮತದಾನ ಬಗ್ಗೆ ಆಕ್ಷೇಪ ಎತ್ತಲಿಲ್ಲ? ಎಂದು ಚುನಾವಣಾ ಆಯೋಗ ಪ್ರಶ್ನೆ ಮಾಡಿದೆ.