ತುಮಕೂರು : 2004ರಲ್ಲಿ ಕಾಂಗ್ರೆಸ್ ನನ್ನನ್ನು ಪಕ್ಷದಿಂದ ಕಿತ್ತು ಹಾಕಿತ್ತು. ಆಮೇಲೆ ನಾನು ಜೆಡಿಎಸ್ ಸೇರಿದೆ. ಇಡೀ ಜಿಲ್ಲೆಯಲ್ಲೇ ಕಾಂಗ್ರೆಸ್ ವೈಟ್ ವಾಷ್ ಮಾಡಿದ್ದೆ. ಮುಂದೆಯೂ ಅಂತಹ ಕಾಲ ಬರಬಹುದು ಎಂದು ಕಾಂಗ್ರೆಸ್ ಹಾಲಿ ಶಾಸಕ ಹಾಗೂ ಮಾಜಿ ಸಚಿವ ಕೆ.ಎನ್.ರಾಜಣ್ಣ ಭವಿಷ್ಯ ನುಡಿದಿದ್ದಾರೆ.
ಮಧುಗಿರಿಯ ದೊಡ್ಡೇರಿಯಲ್ಲಿ ಮಾತನಾಡಿದ ಅವರು, ನಾನು ನನ್ನ ರಾಜಕೀಯ ಜೀವನಕ್ಕೆ ಮರುಹುಟ್ಟು ಪಡೆದಿದ್ದು ಜೆಡಿಎಸ್ ಸೇರಿ ದೊಡ್ಡೇರಿಯಲ್ಲೇ. ಆಗ ನನ್ನನ್ನು ಕಾಂಗ್ರೆಸ್ ಪಕ್ಷ ಉಚ್ಚಾಟಿಸಿತ್ತು. ನಂತರ ಸ್ನೇಹಿತರ ಒತ್ತಾಸೆಯಂತೆ ಜೆಡಿಎಸ್‌ನಿಂದ ಸ್ಪರ್ಧಿಸಿ ಅ ಚುನಾವಣೆಯಲ್ಲಿ ಇಡೀ ಜಿಲ್ಲೆಯಲ್ಲೇ ಕಾಂಗ್ರೆಸ್ ಇಲ್ಲದಂತೆ ಮಾಡಿದ್ದೆ, ಈಗ ಮುಂದೆಯೂ ಅಂತಹ ಕಾಲ ಬರಬಹುದು ಎಂದರು.
ಜೊತೆಗೆ ಕಾರ್ಯಕ್ರಮಕ್ಕೆ ಬರುವಾಗ ನೂರಾರು ಅಭಿಮಾನಿಗಳು, ಕಾರ್ಯಕರ್ತರು ಬೈಕ್ ರ‍್ಯಾಲಿ ಮಾಡಿದ್ದು, ಒಂದೂ ಕಾಂಗ್ರೆಸ್ ಬಾವುಟ ಹಿಡಿದಿರಲಿಲ್ಲ. ಕಾರಣ ಏನು ಗೊತ್ತಿಲ್ಲ. ರಾಜಕಾರಣವೇ ಹಾಗೆ ಯಾರೂ ಶತ್ರುಗಳು ಅಲ್ಲ, ಯಾರೂ ಮಿತ್ರರೂ ಅಲ್ಲ ಎಂದು ಮಾರ್ಮಿಕವಾಗಿ ಹೇಳಿದರು.
ಇನ್ನು ಸರ್ಕಾರ ಬಡವರ ಅಭಿವೃದ್ಧಿಗಾಗಿ ಕೋಟ್ಯಾಂತರ ಹಣ ಖರ್ಚು ಮಾಡುತ್ತಿದೆ. ಈ ಅನುದಾನ ಬಡವರ ಪಾಲಾಗಬೇಕೆ ಹೊರತು ಬಲ್ಲಿದವರ ಪಾಲಾಗಬಾರದು. ನಾನೆಂದೂ ಬಡವರ ಪರವಾಗಿ ರಾಜಕೀಯ ಮಾಡಿಕೊಂಡು ಬಂದವನು. ನಾನು ಜನರನ್ನು ನಂಬಿ ರಾಜಕೀಯ ಮಾಡಿಕೊಂಡು ಬಂದಿದ್ದು ಜನರನ್ನು ನಂಬಿ ರಾಜಕೀಯ ಮಾಡುತ್ತೇನೆ. ಅಧಿಕಾರ ನನಗೆ ಮುಖ್ಯವಲ್ಲ ಎಂದರು.
ಈಗ ನೂರಾರು ಅರ್ಜಿಗಳು ಬಂದಿದ್ದು ನಿವೇಶನ, ಕೊಳವೆಬಾವಿ, ಖಾತೆ ಬದಲಾವಣೆ, ಮನೆ ಬೇಡಿಕೆ ಸೇರಿ ಜಮೀನಿಗೆ ರಸ್ತೆ ಬೇಡಿಕೆಯ ಅರ್ಜಿಗಳು ಬಂದಿದ್ದು ಸೂಕ್ತ ಕ್ರಮವಹಿಸಲು ಮುಂದಾಗುತ್ತೇನೆ ಎಂದು ಹೇಳಿದರು.
ಅಲ್ಲದೆ ಇದೇ ನವೆಂಬರ್ 28 ಕ್ಕೆ ಬಗರ್ ಹುಕುಂ ಸಭೆ ನಡೆಸಿ ಭೂಮಿಯ ಸಮಸ್ಯೆ ಬಗೆಹರಿಸಲಾಗುವುದು. ಎ.ಎಂ. ಕಾವಲ್ ನಲ್ಲಿ ಅರ್ಹ ರೈತರಿದ್ದು ಬೆಂಗಳೂರಿನಿಂದ ಬಂದು ಒತ್ತುವರಿ ಮಾಡಿಕೊಂಡಿರುವ ಹಲವರ ಬಗ್ಗೆ ಅಧಿಕಾರಿಗಳು ನ್ಯಾಯಯುತ ತೀರ್ಮಾನ ಮಾಡಿ ಅರ್ಹ ರೈತರನ್ನು ಉಳಿಸಬೇಕು. ಸರ್ಕಾರಿ ಸ್ವತ್ತಿಗೆ ಸರಿಯಾದ ದಾಖಲೆ ಸಂರಕ್ಷಿಸಿಡಬೇಕು. ಮುಂದೆ ಗ್ರಾ.ಪಂ. ಮಟ್ಟದಲ್ಲಿ ಸಭೆ ನಡೆಸಲಿದ್ದು ಹೆತ್ತವರು ಮಕ್ಕಳನ್ನು ಶಿಕ್ಷಣದಿಂದ ವಂಚಿತರಾಗಿಸಬೇಡಿ ಎಂದರು.
ಇನ್ನು ದೊಡ್ಡೇರಿ ನನಗೆ ಪ್ರಿಯವಾದ ಹೋಬಳಿ. ಇಲ್ಲಿನ ಜನ ನಾನು ಕಷ್ಟದಲ್ಲಿದ್ದಾಗ ಕೈ ಹಿಡಿದವರು. ಜೆಡಿಎಸ್ ನಿಂದ ನಿಂತರೂ ಸರಿ ಕಾಂಗ್ರೆಸ್‌ನಲ್ಲಿ ನಿಂತರೂ ಸರಿ. ಸ್ವತಃ ದೇವೇಗೌಡರು ಬಂದು ಎದೆ ಬಡಿದುಕೊಂಡರೂ 5,500 ಮತಗಳ ಬಹುಮತ ನೀಡಿದ್ದಾರೆ. ಮುಂದೆಯೂ ಅಷ್ಟೇ ಯಾರೇ ಸ್ಪರ್ಧೆಗೆ ಇಳಿದರೂ ನೀವು ನನ್ನ ಜೊತೆಗೆ ಇರಬೇಕೆಂದು ತಿಳಿಸಿ ಮತ್ತೆ ಸ್ಪರ್ಧಿಸುವ ಸುಳಿವು ನೀಡಿದರು. ಇದಕ್ಕೂ ಮೊದಲು ಮಾತನಾಡಿದ್ದ ದೊಡ್ಡೇರಿ ತಾ.ಪಂ ಮಾಜಿ ಸದಸ್ಯ ಪ್ರಸನ್ನ ಕುಮಾರ್ ನಮಗೆ 2028ರಲ್ಲಿ ಮತ್ತೆ ನೀವೇ ಬರಬೇಕು ಬೇರೆ ಉತ್ತಮ ಆಯ್ಕೆ ನಮಗಿಲ್ಲ ಎಂದಿದ್ದರು.