ಬೆಂಗಳೂರು : ಇದೊಂದು ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರದ ಕುಕೃತ್ಯ. ಕಳೆದ ವರ್ಷ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮಾಂಗಲ್ಯ ತೆಗೆಸಿ ಪರೀಕ್ಷೆ ಬರೆಯುವಂತೆ ಹೇಳಿದ್ದ ಕಾಂಗ್ರೆಸ್ ಸರ್ಕಾರ, ಈ ವರ್ಷ ಸಿಇಟಿಯಲ್ಲಿ ಜನಿವಾರ ತೆಗೆಸಿ ತನ್ನ ಹಳೇ ಚಾಳಿಯನ್ನು ಮುಂದುವರಿಸಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಇಟಿ ಮಾರ್ಗಸೂಚಿಯಲ್ಲಿ ಎಲ್ಲಿಯೂ ಜನಿವಾರ ಧರಿಸಬಾರದು ಎಂದು ಉಲ್ಲೇಖಿಸಿಲ್ಲ. ಹಾಗಿದ್ದರೂ ಬಲವಂತ ಮಾಡಿದ್ದು ಯಾಕೆ? ಈ ಘಟನೆ ಇಲ್ಲಿಗೆ ಕೊನೆಯಾಗಬೇಕು. ಕಾಂಗ್ರೆಸ್ ಸರ್ಕಾರ ಷರಿಯಾ ಕಾನೂನನ್ನು ಅನಧಿಕೃತವಾಗಿ ಜಾರಿಗೆ ತಂದಿದೆ. ಇನ್ನೊಂದೆಡೆ ಜಾತಿಗಣತಿ ಹೆಸರಿನಲ್ಲಿ ಹಿಂದೂ ಸಮಾಜವನ್ನು ವಿಭಜಿಸುತ್ತಿದೆ ಎಂದರು.
ಇದನ್ನೂ ಓದಿ : ರಾಜ್ಯ ಕಾಂಗ್ರೆಸ್ನಲ್ಲಿ ಮಹತ್ವದ ಬೆಳವಣಿಗೆ, ಕುತೂಹಲ ಮೂಡಿಸಿದ ಅತ್ಯಾಪ್ತರ ಜೊತೆಗಿನ ಸಿಎಂ ಸಭೆ
ಪದ್ಮನಾಭನಗರ ಕ್ಷೇತ್ರದ ವಿದ್ಯಾರ್ಥಿ ಸಿಇಟಿ ಪರೀಕ್ಷೆ ಬರೆಯಲು ಹೋದಾಗ ಮೂವರು ಸಿಬ್ಬಂದಿ ಜನಿವಾರ ತೆಗೆಯುವಂತೆ ಒತ್ತಡ ಹೇರಿದ್ದಾರೆ. ಇದು ನಮ್ಮ ಸಂಪ್ರದಾಯವಾಗಿದ್ದು, ತೆಗೆಯಲು ಸಾಧ್ಯವಿಲ್ಲ ಎಂದು ವಿದ್ಯಾರ್ಥಿ ಹೇಳಿದ್ದಾರೆ. ಇದು ಹಿಂದೂಗಳ ಭಾವನೆಯಾಗಿದೆ. ಮುಂದೆ ಶಿವದಾರ ಹಾಗೂ ಒಕ್ಕಲಿಗರ ಉಡುದಾರವನ್ನೂ ತೆಗೆದುಹಾಕುತ್ತಾರೆ. ಹೆಣ್ಣುಮಕ್ಕಳ ಮೂಗುತಿಗೂ ಟೇಪ್ ಹಾಕಿದ್ದಾರೆ ಎಂದು ಕಿಡಿಕಾರಿದರು.