ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ದಿನಕ್ಕೊಂದು ಬೆಳವಣಿಗೆ ನಡೆಯುತ್ತಿದೆ. ಕಾಂಗ್ರೆಸ್ನಲ್ಲಿ ಸಿಎಂ ಸಿದ್ದರಾಮಯ್ಯ ಅವರ ಆಪ್ತರೇ ಟಾರ್ಗೆಟ್ ಆಗುತ್ತಿರುವ ಆರೋಪ ಕೇಳಿಬಂದಿದೆ. ಈ ನಡುವೆ ಸಿಎಂ ಹಾಗೂ ಅತ್ಯಾಪ್ತ ಬಳಗದ ಸಚಿವರಿಂದ ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯ ಖಾಸಗಿ ಕಟ್ಟಡದಲ್ಲಿ ಪ್ರತ್ಯೇಕ ಸಭೆ ನಡೆದಿರೋದು ಭಾರಿ ಕುತೂಹಲಕ್ಕೆ ಮೂಡಿಸಿದೆ.
ಈ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಅವರ ಅತ್ಯಾಪ್ತ ಬಳಗದ ಸಚಿವರಾದ ಭೈರತಿ ಸುರೇಶ್, ಡಾ.ಜಿ.ಪರಮೇಶ್ವರ್, ಮಹದೇವಪ್ಪ, ಸತೀಶ್ ಜಾರಕಿಹೊಳಿ, ಜಮೀರ್ ಅಹ್ಮದ್, ದಿನೇಶ್ ಗುಂಡೂರಾವ್ ಭಾಗಿಯಾಗಿದ್ದರು.
ಸಭೆಯಲ್ಲಿ ಚರ್ಚೆಯಾಗಿದ್ದೇನು?
ತಮ್ಮ ಆಪ್ತರೇ ಟಾರ್ಗೆಟ್ ಆಗುತ್ತಿದ್ದರೂ ಸಿಎಂ ಮೌನವಾಗಿರುವ ವಿಚಾರದ ಬಗ್ಗೆ ಸಭೆಯಲ್ಲಿ ಸುದೀರ್ಘ ಸಮಾಲೋಚನೆ ನಡೆದಿದೆ. ಇದು ಹೀಗೆ ಮುಂದುವರಿದರೆ ಪಕ್ಷದ ಹಿರಿಯ ನಾಯಕರ ಅಸ್ತಿತ್ವಕ್ಕೂ ಕುತ್ತು ಬರಬಹುದು. ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದು ಸರಿಯಲ್ಲ. ಇದರಿಂದ 2028ರ ಚುನಾವಣೆ ವೇಳೆ ಪಕ್ಷದ ಮೇಲೆ ಮುನಿಸಿಕೊಂಡು ಸಮುದಾಯಗಳು ದೂರ ಸರಿಯುತ್ತವೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ. ಹಿರಿಯ ನಾಯಕರ ಅನುಭವಗಳಿಗೆ ವಿರುದ್ಧವಾಗಿ ಪಕ್ಷದಲ್ಲಿ ಕೆಲವರು ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಈ ನಡುವೆ ಸಿದ್ದರಾಮಯ್ಯ ಮೌನದಿಂದ ಕಾಂಗ್ರೆಸ್ ಪಕ್ಷಕ್ಕೆ ಡ್ಯಾಮೇಜ್ ಆಗುತ್ತಿದೆ. ಹೀಗಾಗಿ ತಾವು ತಕ್ಷಣ ಮಧ್ಯಪ್ರವೇಶ ಮಾಡಬೇಕೆಂದು ಸಿದ್ದರಾಮಯ್ಯನವರ ಮೇಲೆ ಸಭೆಯಲ್ಲಿ ಒತ್ತಡ ಹೇರಲಾಗಿದೆ ಎನ್ನಲಾಗಿದೆ.