ಬೆಂಗಳೂರು : ರಾಜ್ಯದಲ್ಲಿ ಸರ್ಕಾರಿ ಆವರಣಗಳು ಮತ್ತು ಶಾಲಾ-ಕಾಲೇಜುಗಳಲ್ಲಿ RSS ಚಟುವಟಿಕೆಗಳಿಗೆ ನಿರ್ಬಂಧ ಹೇರಿರುವ ಬೆನ್ನಲ್ಲೇ, ಇದೀಗ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಾರ್ವಜನಿಕ ಸ್ಥಳಗಳು ರಸ್ತೆಗಳು ಮತ್ತು ಸರ್ಕಾರಿ ಆಸ್ತಿಗಳಲ್ಲಿ ನಮಾಜ್ ಮಾಡುವುದನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ತಂದಿರುವ ಹೊಸ ನಿಯಮವನ್ನು ಉಲ್ಲೇಖಿಸಿರುವ ಯತ್ನಾಳ್, ಸಮಾನತೆ ಮತ್ತು ತಟಸ್ಥತೆಯ ತತ್ವವನ್ನು ಸಮಾಜದ ಎಲ್ಲ ವರ್ಗಗಳಿಗೂ ಸಮಾನವಾಗಿ ಜಾರಿಗೊಳಿಸಬೇಕು ಎಂದು ಹೇಳಿದ್ದಾರೆ.
ಯತ್ನಾಳ್ ಬರೆದ ಪತ್ರದಲ್ಲಿ ಏನೇನಿದೆ:-
ಅನುಮತಿಯಿಲ್ಲದೆ ರಸ್ತೆ ಹಾಗೂ ಸರ್ಕಾರಿ ಆವರಣಗಳಲ್ಲಿ ನಮಾಜ್ ಸಲ್ಲಿಸುತ್ತಿರುವ ದೃಶ್ಯಗಳು ಕಾಣಸಿಗುತ್ತಿವೆ. ಇಂತಹ ಚಟುವಟಿಕೆಗಳಿಂದ ವಾಹನ ಸಂಚಾರ ಹಾಗೂ ಪಾದಚಾರಿಗಳಿಗೆ ಅಡಚಣೆ ಉಂಟಾಗುತ್ತಿದೆ. ಇದು ಭಾರತೀಯ ಸಂವಿಧಾನದ ಕಲಂ 19 ಮತ್ತು 21ರ ಅಡಿಯಲ್ಲಿ ಖಾತರಿಯಾದ ಮುಕ್ತ ಸಂಚಾರ ಹಾಗೂ ಭದ್ರತೆ ಎಂಬ ಮೂಲಭೂತ ಹಕ್ಕುಗಳು ಉಲ್ಲಂಘನೆಯಾಗಿದೆ. ಹೀಗಾಗಿ ಸರ್ಕಾರದ ಕಚೇರಿಗಳು ಅಥವಾ ಸರ್ಕಾರಿ ಅನುದಾನಿತ ಸಂಸ್ಥೆಗಳಲ್ಲಿ ನಮಾಜ್ಗೆ ವಿಶೇಷ ಅನುಮತಿ ನೀಡಬಾರದು. ಇತರ ಸಂಸ್ಥೆಗಳ ಕಾರ್ಯಚಟುವಟಿಕೆ ನಿರ್ಬಂಧಿಸಿ ಇಂತಹ ಧಾರ್ಮಿಕ ಚಟುವಟಿಕೆಗಳಿಗೆ ಅವಕಾಶ ನೀಡುವುದು ಆಡಳಿತದ ಮೇಲಿನ ನಂಬಿಕೆಗೆ ಚ್ಯುತಿ ತರಬಹುದಾದ ಕಾರಣ ಈ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸರ್ಕಾರ ಆದೇಶಿಸಬೇಕು. ಅನುಮತಿಯಿಲ್ಲದೆ ರಸ್ತೆಗಳು, ಪಾದಚಾರಿ ಮಾರ್ಗಗಳು ಅಥವಾ ಸರ್ಕಾರಿ ಆವರಣಗಳಲ್ಲಿ ನಮಾಜ್ ಸಲ್ಲಿಸಲು ಅವಕಾಶ ನೀಡದಂತೆ ಸೂಚಿಸಬೇಕು ಎಂದು ಯತ್ನಾಳ್ ಆಗ್ರಹಿಸಿದ್ದಾರೆ.
ಈ ಕ್ರಮಗಳನ್ನು ಸಮಾನವಾಗಿ ಜಾರಿಗೊಳಿಸುವುದರಿಂದ ರಾಜ್ಯದ ಸೆಕ್ಯುಲರಿಸಂ (ಜಾತ್ಯತೀತತೆ), ಕಾನೂನಿನ ಮುಂದೆ ಸಮಾನತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ಬದ್ಧತೆಯನ್ನು ಬಲಪಡಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಸುವ್ಯವಸ್ಥೆ ಮತ್ತು ಶಿಸ್ತನ್ನು ಉತ್ತೇಜಿಸಲು, ಧಾರ್ಮಿಕ ಒಳಗೊಳ್ಳುವಿಕೆಯನ್ನು ಉತ್ತೇಜಿಸಲು ಮತ್ತು ಸಂಚಾರದ ಅಡಚಣೆಯನ್ನು ತಪ್ಪಿಸಲು ಕೂಡಲೇ ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡುವುದನ್ನು ನಿಷೇಧಿಸುವಂತೆ ಯತ್ನಾಳ್ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ. ಅಲ್ಲದೇ ಕರ್ನಾಟಕ ಪೊಲೀಸ್ ಕಾಯ್ದೆ ಮತ್ತು ಸಂಬಂಧಿತ ಸಂಚಾರ ನಿಯಮಾವಳಿಗಳ ಅಡಿಯಲ್ಲಿ ಸಾರ್ವಜನಿಕ ಸ್ಥಳಗಳನ್ನು ಧಾರ್ಮಿಕ ಉದ್ದೇಶಗಳಿಗೆ ಅನಧಿಕೃತವಾಗಿ ಬಳಸುವುದನ್ನು ತಡೆಗಟ್ಟಲು ಸ್ಪಷ್ಟವಾದ SOPಯನ್ನು ಸರ್ಕಾರ ರೂಪಿಸಬೇಕು. ಆ ಮೂಲಕ ಧರ್ಮನಿರಪೇಕ್ಷತೆ, ಕಾನೂನಿನ ಸಮಾನತೆ ಮತ್ತು ಸಾರ್ವಜನಿಕ ಶಿಸ್ತಿನ ಬಗ್ಗೆ ತನ್ನ ಬದ್ಧತೆಯನ್ನು ದೃಢಪಡಿಸಬೇಕು ಎಂದು ಶಾಸಕ ಯತ್ನಾಳ್ ಆಗ್ರಹಿಸಿದ್ದಾರೆ.