‘ನವೆಂಬರ್ 14ಕ್ಕೆ ಮುಹೂರ್ತ ಫಿಕ್ಸ್, ಡಿಕೆಶಿಯೇ ನೆಕ್ಸ್ಟ್ ಸಿಎಂ’

ಬೆಂಗಳೂರು :  ನವೆಂಬರ್ 14ರ ಬಳಿಕ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪತನವಾಗುವುದು ನಿಶ್ಚಿತ ಮತ್ತು ಡಿ.ಕೆ.ಶಿವಕುಮಾರ್ ಅವರೇ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಬಿಜೆಪಿ ಶಾಸಕ ಬಿ.ಸುರೇಶ್‌ಗೌಡ ಸ್ಫೊಟಕ ಭವಿಷ್ಯ ನುಡಿಯುವ ಮೂಲಕ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ.

ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಸುರೇಶ್ ಗೌಡ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಡಿ.ಕೆ. ಶಿವಕುಮಾರ್ ಅವರು ಹಗಲಿರುಳು ರಾಜ್ಯಾದ್ಯಂತ ಪ್ರವಾಸ ಮಾಡಿದರು. ಪಕ್ಷಕ್ಕೆ ಅಗತ್ಯವಿದ್ದ ಹಣಕಾಸಿನ ಸಂಪನ್ಮೂಲವನ್ನು ಒದಗಿಸಿ, 138 ಶಾಸಕರನ್ನು ಗೆಲ್ಲಿಸಿ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತಂದರು. ಅವರ ತಾಕತ್ತು, ಪರಿಶ್ರಮ ಮತ್ತು ಫಂಡ್ ಮೊಬಿಲೈಸ್ ಮಾಡಿದ್ದರಿಂದಲೇ ಇಂದು ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿದೆ. ವಾಡಿಕೆಯಂತೆ ಅವರೇ ಮುಖ್ಯಮಂತ್ರಿ ಆಗಬೇಕಿತ್ತು ಎಂದು ಡಿ.ಕೆ.ಶಿವಕುಮಾರ ಪರ ಬ್ಯಾಟ್ ಬೀಸಿದ್ರು.

ಸಿದ್ದು ಸಿಎಂ ಆಗಲು ಡಿಕಶಿಯೇ ಕಾರಣ..!
ಸಿದ್ದರಾಮಯ್ಯ ಅವರನ್ನು ಪರೋಕ್ಷವಾಗಿ ಕುಟುಕಿದ ಸುರೇಶ್ ಗೌಡ, ಸಿದ್ದರಾಮಯ್ಯನವರು ಸಿಎಂ ಆಗಲು ಡಿ.ಕೆ. ಶಿವಕುಮಾರ್ ಅವರ ಪರಿಶ್ರಮವೇ ಕಾರಣ. ಹಣ ಕೊಟ್ಟಿದ್ದು, ಪಕ್ಷವನ್ನು ಸಂಘಟಿಸಿದ್ದು ಡಿಕೆಶಿ. ಸಿದ್ದರಾಮಯ್ಯ ಏನಾದರೂ ಫಂಡಿಂಗ್ ಮಾಡಿದ್ರಾ? ಕಷ್ಟಪಟ್ಟಿದ್ದು ಒಬ್ಬರು, ಅಧಿಕಾರ ಅನುಭವಿಸುತ್ತಿರುವುದು ಇನ್ನೊಬ್ಬರು. ಈ ಅಸಮಾಧಾನ ಕಾಂಗ್ರೆಸ್‌ನೊಳಗೆ ಭುಗಿಲೆದ್ದಿದೆ ಎಂದು ಆರೋಪಿಸಿದರು.

ಮುಂಬರುವ ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ನಂತರ ರಾಜ್ಯ ರಾಜಕೀಯದಲ್ಲಿ ಮಹತ್ವದ ಬದಲಾವಣೆಗಳಾಗಲಿವೆ ಎಂದು ಸುರೇಶ್ ಗೌಡ ಭವಿಷ್ಯ ನುಡಿದರು. ನವೆಂಬರ್ 14ರ ಬಳಿಕ ಪಂಚರಾಜ್ಯಗಳ ಚುನಾವಣಾ ಪ್ರಕ್ರಿಯೆಗಳು ಮುಗಿಯುತ್ತವೆ. ಅದರ ಫಲಿತಾಂಶ ಬಂದ ನಂತರ ಕರ್ನಾಟಕ ಕಾಂಗ್ರೆಸ್ ಸರ್ಕಾರ ಪತನವಾಗುವುದು ಗ್ಯಾರಂಟಿ. ಈ ಬಗ್ಗೆ ನನಗೆ ಖಚಿತ ಮಾಹಿತಿ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಇನ್ನು ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುವ ಬಗ್ಗೆ ತಮ್ಮ ಆಪ್ತ ವಲಯದಲ್ಲಿ ವಿಶ್ವಾಸದಿಂದ ಮಾತನಾಡಿದ್ದಾರೆ ಎಂದು ಸುರೇಶ್ ಗೌಡ ಉಲ್ಲೇಖಿಸಿದರು. ತಾನು ನೂರಕ್ಕೆ ನೂರು ಸಿಎಂ ಆಗುತ್ತೇನೆ ಎಂದು ಡಿ.ಕೆ. ಶಿವಕುಮಾರ್ ಅವರು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಏನೇ ಆಗಲಿ, ಈ ಸರ್ಕಾರದ ಆಯಸ್ಸು ಹೆಚ್ಚು ದಿನವಿಲ್ಲ. ನವೆಂಬರ್ 14ರ ನಂತರ ಎಲ್ಲವೂ ಬದಲಾಗಲಿದೆ ಎಂದು ಅವರು ಸ್ಪೋಟಕ ಹೇಳಿಕೆ ನೀಡಿದ್ರು.

Leave a Reply

Your email address will not be published. Required fields are marked *