ಬೆಳಗಾವಿ : ರಾಜ್ಯದಲ್ಲಿ ಅಧಿಕಾರ ಬದಲಾವಣೆ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲೇ ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮುಂದಿನ ಸಿಎಂ ಯಾರಾಗಲಿದ್ದಾರೆ ಎಂಬ ಕುರಿತು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಸತೀಶ್ ಜಾರಕಿಹೊಳಿ, ಎಂ.ಬಿ.ಪಾಟೀಲ್ ಸೇರಿ ಯಾರೂ ಸಿಎಂ ಆಗಲ್ಲ. ನವೆಂಬರ್ ಕ್ರಾಂತಿಯಲ್ಲಿ ಬ್ಲ್ಯಾಕ್ ಹಾರ್ಸ್ ಬರ್ತದೆ, ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವತ್ತು ಸಿದ್ದರಾಮಯ್ಯ ಅವರು ಸತೀಶ್ ಜಾರಕಿಹೊಳಿಯನ್ನು ಏನಾದರೂ ಮುಂದಿನ ಸಿಎಂ ಎಂದು ಹೇಳಿಬಿಡುತ್ತಾರೋ ಎಂದು ಎಂ.ಬಿ.ಪಾಟೀಲ್ ಸಿಎಂಗೆ ಹಾರ ಹಾಕುತ್ತಿದ್ದಾರೆ. ನಮಗೆ ಯಾರು ಸಿಎಂ ಆದರೂ ವಿರೋಧ ಇಲ್ಲ. ನೀವು ನೋಡುತ್ತಿರಿ, ಇವರ್ಯಾರೂ ಸಿಎಂ ಆಗಲ್ಲ. ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಲಿದ್ದಾರೆ ಎಂದರು.
ಇನ್ನು ಹಿಂದೂ ಸಮಾಜವನ್ನು ಟಾರ್ಗೆಟ್ ಮಾಡಲಾಗುತ್ತಿದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾರೇ ಆಗಲಿ ಮತಾಂತರವಾದರೆ ಅವರಿಗೆ ಮೂಲ ಜಾತಿಯ ಮೀಸಲಾತಿ ಸಿಗಬಾರದು. ಭ್ರಷ್ಟ ರಾಜಕಾರಣಿಗಳು ಧರ್ಮ ಒಡೆದರೇ ವೋಟ್ ಬರುತ್ತೆ ಕಾಯುತ್ತಿದ್ದಾರೆ. ಕುರುಬ ಕ್ರಿಶ್ಚಿಯನ್ನರು, ಒಕ್ಕಲಿಗ ಕ್ರಿಶ್ಚಿಯನ್ನರು ಅಂತ ಎಲ್ಲಾದರೂ ಇದ್ದಾರಾ? ನಾವು ಹಿಂದೂ ಲಿಂಗಾಯತ ಎಂದು ಬರೆಸುತ್ತಿದ್ದೇವೆ. ಪ್ರತ್ಯೇಕ ಲಿಂಗಾಯತ ಧರ್ಮ ಎಂದು ಎಲ್ಲಿಯಾದರೂ ಇದೆಯಾ? ಪ್ರಶ್ನೆ ಮಾಡಿದ್ರು.