ಹುಬ್ಬಳ್ಳಿ : ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯನೇ ಸಿಎಂ ಆಗಿ ಮುಂದುವರೆಯಬೇಕು. ಇಲ್ಲದಿದ್ದರೆ ಸರ್ಕಾರವೇ ಪತನವಾಗುತ್ತೆ ಎಂದು ಮಾಜಿ ಸಿಎಂ, ಹಾಲಿ ಸಂಸದ ಜಗದೀಶ್ ಶೆಟ್ಟರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಣ್ಣ ನಿವಾಸದಲ್ಲಿನ ಔತಣ ಕೂಟ ಏರ್ಪಡಿಸಿರುವುದು ರಾಜಕಾರಣ ಹಿನ್ನೆಲೆಯದ್ದು. ಮೇಲಾಗಿ ನವೆಂಬರ್ ಕ್ರಾಂತಿ ಬಗ್ಗೆ ಬಿಜೆಪಿ ನಾಯಕರು ಹೇಳಿಲ್ಲ. ನಿನ್ನೆ ಔತಣ ಕೂಟ ಕರೆದವರೇ ಹೇಳಿದ್ದು. ಕ್ರಾಂತಿ ಆಗುತ್ತೋ, ಭ್ರಾಂತಿ ಆಗುತ್ತೋ ಗೊತ್ತಿಲ್ಲ! ಆದರೆ ಏನೋ ಒಂದು ಆಗೇ ಆಗುತ್ತೆ. ನವೆಂಬರ್ ಅಂತ್ಯದಲ್ಲಿ ರಾಜಕೀಯ ಅಂತೂ ಬದಲಾವಣೆ ಆಗುತ್ತೆ ಎಂದರು.
ಇನ್ನು ಇತ್ತ ಕಬ್ಬಿನ ದರಕ್ಕಾಗಿ ಸಭೆ, ಅತ್ತ ಔತಣಕೂಟ. ಸಿಎಂ ಸಿದ್ದರಾಮಯ್ಯ ರೈತರು, ಶುಗರ್ ಫ್ಯಾಕ್ಟರಿ ಮಾಲೀಕರನ್ನ ಸಭೆಗೆ ಕರೀತಿರಿ. ಆದರೆ ಕೇವಲ ಅರ್ಧ ಗಂಟೆ ಸಭೆ ಮಾಡಲು ಆಗುತ್ತಾ? ರಾಜಣ್ಣ ಅವರಿಗೆ ಮೊದಲೇ ಬರಲು ಆಗೋಲ್ಲ ಅಂತಾ ಹೇಳಬೇಕಿತ್ತು. ಸಭೆ ನಡೆಸಬೇಕಿದೆ ಅಂತಾ ಗಟ್ಟಿಯಾಗಿ ಹೇಳಬೇಕಿತ್ತು. ಅದನ್ನು ಬಿಟ್ಟು ಈಗ ಕೊನೆ ಗಳಿಗೆಯಲ್ಲಿ ಔತಣಕೂಟ ರದ್ದು ಮಾಡಿದ್ದಾರೆ ಎಂದರು.
ಸಿಎಂ ಪಟ್ಟದ ಆಸೆಯಲ್ಲಿ ಡಿಕೆಶಿ ಟೀಂ..!
ಸಿಎಂ ಆಗಿ ಸಿದ್ದರಾಮಯ್ಯ 5 ವರ್ಷ ಮುಂದುವರಿಯುತ್ತಾರೆ. ಸಿದ್ದರಾಮಯ್ಯ ಕೆಳಗಿಳಿದರೆ ಈ ಸರ್ಕಾರವೇ ಪತನವಾಗೋದು ಖಚಿತ ಎಂದರು. ಡಿ.ಕೆ.ಶಿವಕುಮಾರ ಎಲ್ಲಿಯೂ ಸಿಎಂ ಆಗಿ ಸಿದ್ದರಾಮಯ್ಯ ಅವರೇ ಐದು ವರ್ಷ ಇರುತ್ತಾರೆ ಎಂದು ಹೇಳಿಲ್ಲ. ಡಿಕೆಶಿ ಬಹಿರಂಗವಾಗಿ ಹೇಳಲಿ ನೋಡೋಣ. ಹೇಳಿಲ್ಲ ಅಂದ್ರೆ ನಾಯಕತ್ವ ಬದಲಾವಣೆಯ ಕೆಲಸ ನಡೀತಾ ಇದೆ ಅಂತ ಅರ್ಥ. ಇದೆ ರೀತಿ ಮುಂದುವರೆದರೆ ಸರ್ಕಾರ ಪತನ ಆಗೋದು ಖಚಿತ ಎಂದರು.
ಇನ್ನು ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಜೈಲಿನಲ್ಲಿರುವ ಖೈದಿಗಳಿಗೆ ರಾಜಾತಿಥ್ಯ ಕೊಡಲಾಗುತ್ತಿದೆ ಎಂಬ ಆರೋಪ ವಿಚಾರವಾಗಿ ಮಾತನಾಡಿ,ಉಗ್ರರಿಗೆ ರಾಜಾತಿಥ್ಯ ನೀಡುವಲ್ಲಿ ಸಚಿವರು, ಅಧಿಕಾರಿಗಳು ಶಾಮೀಲುಲಾಗಿದ್ದಾರೆ.
ಉಗ್ರರಿಗೆ, ಕೈದಿಗಳಿಗೆ ಫೋನ್ ಇತ್ಯಾದಿಗಳನ್ನು ಪೂರೈಸಲಾಗ್ತಿದೆ.
ಸಿದ್ದರಾಮಯ್ಯ ಸರ್ಕಾರದಲ್ಲಿ ಇದೆಲ್ಲ ಮಾಮೂಲು ಎಂಬಂತೆ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಏನೂ ಬೇಕಾದ್ರೂ ನಡೆಯುತ್ತದೆ. ಅದರಲ್ಲೂ ಅಲ್ಪಸಂಖ್ಯಾತರ ತುಷ್ಟೀಕರಣ ಹೆಚ್ಚಾಗಿದೆ. ಜೈಲಿನಲ್ಲಿರುವ ಭಯೋತ್ಪಾದಕರಿಗೂ ರಾಜಾತಿಥ್ಯ ಕೊಡಲಾಗುತ್ತಿದೆ. ಆ ಮೂಲಕ ಅಕ್ರಮ ಚಟುವಟಿಕೆ ನಡೆಯುವಂತೆ ಮಾಡಿದ್ದಾರೆ. ಇದರಲ್ಲಿ ಕೆಲ ಸಚಿವರು, ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.