ಕೊಲ್ಕತ್ತಾ : ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಚಿತ್ರಣವೇ ಬದಲಾಗಿದೆ. ಸುದೀರ್ಘ ಆಡಳಿತ ನಡೆಸಿದ್ದ ಮಮತಾ ಬ್ಯಾನರ್ಜಿಗೆ ಬಹುದೊಡ್ಡ ಹಿನ್ನಡೆಯಾಗಿದೆ. ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಬಹುದೊಡ್ಡ ಪಕ್ಷವಾಗಿ ಗೆದ್ದಿದೆ. ಮಮತಾ ಬ್ಯಾನರ್ಜಿ ಅವರ ಟಿಎಂಸಿ ಸೋತಿದ್ದು ಮಾತ್ರವಲ್ಲ, ಸ್ವತಃ ಮಮತಾ ಬ್ಯಾನರ್ಜಿ ಅವರೇ ಬಿಜೆಪಿ ನಾಯಕ ಸುವೆಂದು ಅಧಿಕಾರಿ ಎದುರು 15 ಸಾವಿರ ಮತಗಳ ಅಂತರದಿಂದ ಸೋತಿದ್ದಾರೆ.
ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಅವರು ಭವಾನಿಪುರದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು 15,000 ಕ್ಕೂ ಹೆಚ್ಚು ಮತಗಳಿಂದ ಸೋಲಿಸಿದ್ದಾರೆ ಎಂದು ಭಾರತ ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಮಾಹಿತಿ ನೀಡಲಾಗಿದೆ.
ಇದನ್ನೂ ಓದಿ : ತಮಿಳುನಾಡು ರಾಜಕೀಯ ಹೊಸ ಇತಿಹಾಸ, ಚೊಚ್ಚಲ ಪ್ರಯತ್ನದಲ್ಲೇ ಸರ್ಕಾರ ರಚನೆಯತ್ತ ದಳಪತಿ ವಿಜಯ್
ಬಿಜೆಪಿ ಭವಾನಿಪುರವನ್ನು ಗೆದ್ದುಕೊಂಡಿದ್ದಲ್ಲದೆ, ಕೋಲ್ಕತ್ತಾದ 11 ಸ್ಥಾನಗಳಲ್ಲಿ ಐದನ್ನು ತನ್ನದಾಗಿಸಿಕೊಂಡಿದೆ. ದಕ್ಷಿಣ ಕೋಲ್ಕತ್ತಾದ ರಾಶ್ಬೆಹಾರಿ ಮತ್ತು ಉತ್ತರ ಕೋಲ್ಕತ್ತಾದ ಜೋಡಾಸಾಂಕೋ, ಶ್ಯಾಮ್ಪೂಕುರ್, ಮಾಣಿಕ್ತಲಾ ಮತ್ತು ಕಾಶಿಪುರ್-ಬೆಲ್ಗಾಚಿಯಾ ಈ ಟಿಎಂಸಿಯ ಭದ್ರಕೋಟೆಗಳೆಂದು ಪರಿಗಣಿಸಲ್ಪಟ್ಟಿದ್ದವು. ಬಿಜೆಪಿ ಕೋಲ್ಕತ್ತಾ ಪೋರ್ಟ್, ಬಲ್ಲಿಗಂಜ್, ಚೌರಂಗಿ, ಎಂಟಾಲಿ ಮತ್ತು ಬೆಲೆಘಾಟ ಸೇರಿದಂತೆ ಐದು ಸ್ಥಾನಗಳನ್ನು ಗೆದ್ದಿದೆ.
ಏಪ್ರಿಲ್ 2 ರಂದು, ಸುವೇಂದು ಅಧಿಕಾರಿ ಕೋಲ್ಕತ್ತಾದ ಭವಾನಿಪುರ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದಾಗ, ಕೇಂದ್ರ ಗೃಹ ಸಚಿವ ಅಮಿತ್ ಶಾ ರೋಡ್ಶೋ ನಡೆಸುತ್ತಾ ಪಶ್ಚಿಮ ಬಂಗಾಳದಲ್ಲಿ ಬದಲಾವಣೆ ಭವಾನಿಪುರದಿಂದ ಬರಲಿದೆ ಎಂದು ಹೇಳಿದ್ದರು. “ಪಶ್ಚಿಮ ಬಂಗಾಳದಲ್ಲಿ ಬದಲಾವಣೆ ತರುವ ಜವಾಬ್ದಾರಿ ಭವಾನಿಪುರದ ಮತದಾರರ ಕೈಯಲ್ಲಿದೆ. ಬದಲಾವಣೆ ತರಲು ನಾವು 170 ಗುರಿಯನ್ನು ತಲುಪಲು ಒಂದರ ನಂತರ ಒಂದರಂತೆ ಸ್ಥಾನಗಳನ್ನು ಗೆಲ್ಲಬೇಕಾಗಿದೆ. ಆದರೆ ನನ್ನ ಬಳಿ ಒಂದು ಶಾರ್ಟ್ಕಟ್ ಇದೆ. ಭವಾನಿಪುರದ ಮತದಾರರು ಈ ಒಂದು ಸ್ಥಾನವನ್ನು ಖಚಿತಪಡಿಸಿಕೊಂಡರೆ, ಬದಲಾವಣೆ ತಾನಾಗಿಯೇ ಬರುತ್ತದೆ” ಎಂದು ಶಾ ಹೇಳಿದರು. ಅದೀಗ ಸತ್ಯವಾಗಿದೆ.. ಈ ಸಲ ಪಶ್ಚಿಮ ಬಂಗಾಳದ ಚುನಾವಣೆ ಟಿಎಂಸಿಗೆ ಸಾಕಷ್ಟು ಶಾಕ್ ನೀಡಿದೆ. ಶಾಸಕ ಮತ್ತು ಸದಸ್ಯ-ಮೇಯರ್-ಇನ್-ಕೌನ್ಸಿಲ್ ದೇಬಶಿಶ್ ಕುಮಾರ್, ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ ಶಶಿ ಪಂಜಾ ಮತ್ತು ಕೋಲ್ಕತ್ತಾ ಉಪ ಮೇಯರ್ ಅತೀನ್ ಘೋಷ್ ಸೇರಿದಂತೆ ಹಲವಾರು ಪ್ರಮುಖ ಟಿಎಂಸಿ ನಾಯಕರು ಸೋತಿದ್ದಾರೆ.