ತಮಿಳುನಾಡು ರಾಜಕೀಯ ಹೊಸ ಇತಿಹಾಸ, ಚೊಚ್ಚಲ ಪ್ರಯತ್ನದಲ್ಲೇ ಸರ್ಕಾರ ರಚನೆಯತ್ತ ದಳಪತಿ ವಿಜಯ್‌

ತಮಿಳುನಾಡು : ನಟ ದಳಪತಿ ವಿಜಯ್ ಅವರ ಟಿವಿಕೆ ಪಕ್ಷ ತಮಿಳುನಾಡು ರಾಜಕೀಯದಲ್ಲಿ ಸುನಾಮಿಯನ್ನೇ ಎಬ್ಬಿಸಿದೆ. ಈ ಪಕ್ಷ ಮಧ್ಯಾಹ್ನದ 2 ಗಂಟೆ ಟ್ರೆಂಡ್ ವೇಳೆಗೆ 110 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ. ಇದು ವಿಜಯ್ ಪಕ್ಷ ಮಾಡಿದ ಸಾಧನೆ. ವಿಜಯ್ ಪಕ್ಷದ ಗೆಲುವಿನ ಬೆನ್ನಲ್ಲೇ ತ್ರಿಷಾ ಅವರು ಚೆನ್ನೈನಲ್ಲಿರುವ ವಿಜಯ್ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಮುಂಜಾನೆ ಅವರು ತಿರುಪತಿಗೆ ತೆರಳಿ ತಿಮ್ಮಪ್ಪನ ದರ್ಶನ ಪಡೆದಿದ್ದರು. ಆ ಬಳಿಕ ಅವರು ನೇರವಾಗಿ ವಿಜಯ್ ಮನೆಗೆ ಬಂದಿದ್ದಾರೆ. ವಿಶೇಷ ಎಂದರೆ, ಇಂದು ತ್ರಿಷಾ ಅವರ ಜನ್ಮದಿನ ಕೂಡ ಹೌದು.

ಒಂದು ಕಡೆ ದಾಂಪತ್ಯ ಜೀವನದಲ್ಲಿನ ಏರುಪೇರುಗಳಂತಹ ವೈಯಕ್ತಿಕ ಸವಾಲುಗಳು, ಇನ್ನೊಂದೆಡೆ 2026ರ ವಿಧಾನಸಭಾ ಚುನಾವಣೆಯ ನಿರ್ಣಾಯಕ ಫಲಿತಾಂಶ ಈ ಎರಡೂ ತುದಿಗಳ ನಡುವೆ ವಿಜಯ್ ಅವರ ಬದುಕು ಈಗ ಐತಿಹಾಸಿಕ ತಿರುವಿನಲ್ಲಿದೆ. ಸಿನಿಮಾ ರಂಗದ ಸೂಪರ್‌ಸ್ಟಾರ್ ಈಗ ತಮಿಳುನಾಡಿನ ಕಿಂಗ್‌ ಮೇಕರ್ ಆಗಿ ಉದಯಿಸುತ್ತಿದ್ದಾರೆ. ಏಪ್ರಿಲ್‌ 23ರಂದು ತಮಿಳುನಾಡಿನ 234 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ದಾಖಲೆಯ ಮಟ್ಟದ ಮತದಾನವಾಗಿದ್ದು, ರಾಜಕೀಯ ಚಿತ್ರಣವೇ ಬದಲಾಗಲಿದೆ ಎನ್ನುವ ಮಾತು ಕೇಳಿ ಬಂದಿತ್ತು. ಅದರಂತೆ ಇದೀಗ ಅಚ್ಚರಿಯ ಫಲಿತಾಂಶ ಹೊರ ಬೀಳುತ್ತಿದೆ. ಅದಾಗ್ಯೂ ಇಷ್ಟರಮಟ್ಟಿಗೆ ಟಿವಿಕೆ ಪ್ರಭಾವ ಬೀರಲಿದೆ ಎನ್ನುವುದನ್ನು ಯಾರೂ ಊಹಿಸಿರಲಿಲ್ಲ.

51 ವರ್ಷದ ವಿಜಯ್‌ ಕಾಲಿವುಡ್‌ನಲ್ಲಿ ಸೂಪರ್‌ ಸ್ಟಾರ್‌ ಆಗಿ ಮೆರೆದವರು. ಪ್ರತಿ ಚಿತ್ರಕ್ಕೂ ಕೋಟಿ ಕೋಟಿ ರುಪಾಯಿ ಸಂಭಾವನೆ ಪಡೆಯುವ ಅವರ ಚಿತ್ರಗಳು ಬಾಕ್ಸ್‌ ಆಫೀಸ್‌ನಲ್ಲಿ ಕಮಾಲ್‌ ಮಾಡುತ್ತಿದ್ದವು. ಇಂತಹ ಸೂಪರ್‌ ಸ್ಟಾರ್‌ 2023ರಲ್ಲಿ ಇದ್ದಕ್ಕಿದ್ದಂತೆ ತಾವು ಚಿತ್ರರಂಗದಿಂದ ನಿವೃತ್ತಿ ಪಡೆದು ರಾಜಕೀಯಕ್ಕೆ ಧುಮ್ಮಿಕ್ಕುವುದಾಗಿ ಘೋಷಿಸುವ ಮೂಲಕ ಲಕ್ಷಾಂತರ ಅಭಿಮಾನಿಗಳಿಗೆ ಶಾಕ್‌ ನೀಡಿದ್ದರು. ʼಜನನಾಯಗನ್‌ʼ ತಮ್ಮ ಕೊನೆಯ ಚಿತ್ರ ಎಂದು ಪ್ರಕಟಿಸುವ ಮೂಲಕ ಸಕ್ರಿಯ ರಾಜಕೀಯಕ್ಕೆ ತೆರಳುವ ಸೂಚನೆ ನೀಡಿದ್ದರು.

Leave a Reply

Your email address will not be published. Required fields are marked *