ಕುತೂಹಲ ಕೆರಳಿಸಿದ ಕೆ.ಎನ್‌.ರಾಜಣ್ಣ ಮನೆಯ ಔತಣಕೂಟ, ಸಿಎಂ ಸಿದ್ದರಾಮಯ್ಯ ಭಾಗಿ

ಬೆಂಗಳೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆ-ನವೆಂಬರ್‌ ಕ್ರಾಂತಿ ವಿಚಾರ ದಿನಕ್ಕೊಂದು ತಿರುವು ಪಡೆಯುತ್ತಿವೆ. ಈ ಬೆನ್ನಲ್ಲೇ ಇದೀಗ ಮಾಜಿ ಸಚಿವ ಕೆ.ಎನ್.ರಾಜಣ್ಣ ಮನೆಯಲ್ಲಿ ಔತಣಕೂಟ ಏರ್ಪಡಿಸಿದ್ದು, ಅರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗಿಯಾಗುತ್ತಿರುವುದು ಇನ್ನಷ್ಟು ಕುತೂಹಲ ಮೂಡಿಸಿದೆ.

ಹೌದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತುಮಕೂರಿನ ಗ್ರಾಮೀಣ ಪ್ರದೇಶದ ಬಿದರಕಟ್ಟೆಯಲ್ಲಿ ವಿಶ್ವವಿದ್ಯಾಲಯ ಕ್ಯಾಂಪಸ್ ಉದ್ಘಾಟಿಸಲಿದ್ದು, ನಂತರ ತುಮಕೂರಿನಲ್ಲಿ ಕ್ಯಾನ್ಸರ್ ಚಿಕಿತ್ಸಾಲಯವನ್ನು ಉದ್ಘಾಟಿಸಲಿದ್ದಾರೆ. ಬಳಿಕ ರಾಜಣ್ಣ ಅವರ ಮನೆಯಲ್ಲಿ ಔತಣಕೂಟ ಏರ್ಪಡಿಸಿದ್ದು ಅದರಲ್ಲಿ ಭಾಗಿಯಾಗಲಿದ್ದಾರೆ. ಇದೇ ವೇಳೆ ಗೃಹ ಸಚಿವ ಪರಮೇಶ್ವರ್ ಕೂಡ ಮುಖ್ಯಮಂತ್ರಿಗಳಿಗೆ ಸಾಥ್ ನೀಡಲಿದ್ದಾರೆಂದು ತಿಳಿದುಬಂದಿದೆ.
ಔತಣಕೂಟದಲ್ಲಿ ಸಿದ್ದರಾಮಯ್ಯ ಅವರು, ರಾಜಣ್ಣ ಅವರನ್ನು ಸಂಪುಟಕ್ಕೆ ಮರಳಿ ಸೇರ್ಪಡೆಗೊಳಿಸುವ ಕುರಿತು ಮಾತುಕತೆ ನಡೆಸಬಹುದು ಎಂದು ಮೂಲಗಳು ತಿಳಿಸಿವೆ. ಈ ನಡುವೆ ನವೆಂಬರ್ 15 ರಂದು ಮುಖ್ಯಮಂತ್ರಿಗಳು ದೆಹಲಿಗೆ ಭೇಟಿ ನೀಡಲಿದ್ದು, ಈ ವೇಳೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಸಂಪುಟ ಪುನರ್ರಚನೆಗೆ ಒಪ್ಪಿಗೆ ಪಡೆಯುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ಕ್ರಾಂತಿ ಏನಿದ್ದರೂ 2028ಕ್ಕೆ, ನಾನು ಪಕ್ಷ ಹಾಕಿದ ಗೆರೆ ದಾಟುವುದಿಲ್ಲ
ಇನ್ನು ರಾಜಣ್ಣ ಮನೆಯಲ್ಲಿ ಏರ್ಪಡಿಸಲಾಗುತ್ತಿರುವ ಔತಣಕೂಟ ಕುರಿತು ಗೃಹ ಸಚಿವ ಪರಮೇಶ್ವರ್ ಅವರು ಪ್ರತಿಕ್ರಿಯೆ ನೀಡಿದ್ದು, ಇದು ಔತಣಕೂಟವಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತುಮಕೂರಿನಲ್ಲಿದ್ದಾಗಲೆಲ್ಲಾ ರಾಜಣ್ಣ ಅವರ ಮನೆಗೆ ಭೇಟಿ ನೀಡುವುದು ವಾಡಿಕೆ ಎಂದು ಸಮಜಾಯಷಿ ನೀಡಿದ್ದಾರೆ.

ಮುಖ್ಯಮಂತ್ರಿಗಳು 5ನೇ ಬಾರಿಗೆ ತುಮಕೂರಿಗೆ ಭೇಟಿ ನೀಡುತ್ತಿದ್ದಾರೆ. ತುಮಕೂರಿಗೆ ಭೇಟಿ ನೀಡಿದಾಗಲೆಲ್ಲಾ ರಾಜಣ್ಣ ಮನೆಗೆ ತೆರಳಿದ್ದಾರೆ. ಮೂರು ಬಾರಿ ರಾಜಣ್ಣ ಮನೆಗೆ ಹೋಗಿದ್ದಾರೆ. ನಾಯಕರು ಆಹ್ವಾನ ನೀಡಿದಾಗ ಮುಖ್ಯಮಂತ್ರಿಗಳು, ನಾವು ಹಾಗೂ ಜಿಲ್ಲೆಯ ನಾಯಕರು ಹೋಗುತ್ತೇವೆ. ಈ ಬಾರಿಯೂ ಆಹ್ವಾನ ನೀಡಿದ್ದಾರೆ. ಮುಖ್ಯಮಂತ್ರಿಗಳು ಹೋಗೋಣ ಎಂದರು, ಹೀಗಾಗಿ ನಾವು ಹೋಗುತ್ತಿದ್ದೇವೆ. ಈ ವೇಳೆ ಯಾವುದೇ ರಾಜಕೀಯ ಚರ್ಚೆಗಳೂ ನಡೆಯುವುದಿಲ್ಲ. ಊಟ ಮಾಡಿ, ಬರುತ್ತೇವಷ್ಟೇ ಎಂದು ತಿಳಿಸಿದರು.

Leave a Reply

Your email address will not be published. Required fields are marked *