ನವದೆಹಲಿ : ನವೆಂಬರ್ ಕ್ರಾಂತಿನೂ ಇಲ್ಲ, ಡಿಸೆಂಬರ್ ಕ್ರಾಂತಿನೂ ಇಲ್ಲ, ಜನವರಿ, ಫೆಬ್ರವರಿಗೂ ಆಗುವುದಿಲ್ಲ. ಕ್ರಾಂತಿ ಆಗುವುದು ಏನಿದ್ದರೂ 2028ಕ್ಕೆ ಅದು ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವ ಮೂಲಕ ನಾನು ಪಕ್ಷದ ಶಿಸ್ತಿನ ಸಿಪಾಯಿ ಪಕ್ಷ ಹಾಕಿದ ಗೆರೆ ದಾಟುವುದಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವೆಂಬರ್ ಕ್ರಾಂತಿ ಡಿಸೆಂಬರ್ ಕ್ರಾಂತಿ ಏನೂ ಇಲ್ಲ. ಯಾರೋ ಸುಮ್ಮನೆ ಬರೆದಿದ್ದಾರೆ. ಪಕ್ಷ ನಮಗೆ ಬಿಹಾರ ಚುನಾವಣೆ ಸೇರಿದಂತೆ ಅನೇಕ ಜವಾಬ್ದಾರಿಗಳನ್ನು ನೀಡಿದ್ದು, ನಾವು ಅದನ್ನು ಮಾಡುತ್ತಿದ್ದೇವೆ. ಇದರ ಹೊರತಾಗಿ ಬೇರೆ ಯಾವುದೇ ಕ್ರಾಂತಿ ಆಗುವುದಿಲ್ಲ ಎಂದರು.
ಇದನ್ನೂ ಓದಿ : ಸಿಎಂ ರೇಸ್‌ನಿಂದ ಹಿಂದೆ ಸರಿದ್ರಾ ಡಿಕೆಶಿ?; ಹೀಗಂದಿದ್ಯಾಕೆ ಡಿ.ಕೆ.ಸುರೇಶ್?
ಇನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡುತ್ತೀರಾ ಎಂದು ಕೇಳಿದಾಗ, ನಾನು ಯಾರನ್ನೂ ಭೇಟಿ ಮಾಡುವುದಿಲ್ಲ. ನನ್ನ ಬಳಿ ಯಾರೂ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಮಾಡಿಲ್ಲ. ನನಗೆ ಯಾವುದೇ ನಾಯಕರನ್ನು ಭೇಟಿ ಮಾಡುವ ಕಾರ್ಯಕ್ರಮ ಇಲ್ಲ. ಪಕ್ಷ ಸಂಘಟನೆ ವಿಚಾರವಾಗಿ ಚರ್ಚೆ ಮಾಡಲಾಗುವುದು. ಮತಗಳ್ಳತನ ವಿಚಾರವಾಗಿ ನಿನ್ನೆ ರಾತ್ರಿಯೂ ಸಭೆ ಮಾಡಿದ್ದೇವೆ, ಇಂದು ಸಭೆ ಮಾಡಿದ್ದೇವೆ. ನಾಯಕತ್ವ ಬದಲಾವಣೆ ಬಗ್ಗೆ ನಾನು ಏನಾದರೂ ಹೇಳಿದ್ದೇನಾ? ಸಿಎಂ ಏನಾದರೂ ಹೇಳೀದ್ದಾರಾ? ಪಕ್ಷ ಏನು ಹೇಳುತ್ತದೆಯೋ ಅದನ್ನು ಕೇಳಿಕೊಂಡು ಹೋಗುತ್ತೇವೆ ಎಂದರು.
ಪಕ್ಷ ಹಾಕಿದ ಗೆರೆ ಬಿಟ್ಟು ಹೋಗುವುದಿಲ್ಲ..!
ಸಿಎಂ ಐದು ವರ್ಷ ಇರಬೇಕು ಎಂದು ಹೈಕಮಾಂಡ್ ಹೇಳಿದರೆ ಐದು ವರ್ಷ ಇರುತ್ತಾರೆ. ಹತ್ತು ವರ್ಷ ಇರಬೇಕು ಎಂದರೆ ಹತ್ತು ವರ್ಷ ಇರುತ್ತಾರೆ. 15 ವರ್ಷ ಇರಬೇಕು ಎಂದರೆ 15 ವರ್ಷ ಇರುತ್ತಾರೆ. ನಮಗೆ ಕೊಟ್ಟ ಕೆಲಸ ಮಾಡಿಕೊಂಡು ಹೋಗುತ್ತಿರಬೇಕು. ನಾನು ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷದ ರೇಖೆ ಬಿಟ್ಟು ನಾನು ಎಂದಿಗೂ ಹೋಗುವುದಿಲ್ಲ. ದೆಹಲಿ ನಾಯಕರು ಯಾವಾಗ, ಯಾವ ರೀತಿ ಮಾಡಬೇಕೋ ಮಾಡುತ್ತಾರೆ ಎಂದರು. ಯಾವ ಸಂಪುಟ ವಿಸ್ತರಣೆ ಚರ್ಚೆಯೂ ನಡೆದಿಲ್ಲ ಎಂದರು.