ಪಶ್ಚಿಮ ಬಂಗಾಳ : ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭಾರೀ ಜಯ ಸಾಧಿಸಿ 207 ಸ್ಥಾನಗಳನ್ನು ಗೆದ್ದಿದೆ. ಈ ಜಯದ ನಂತರ, ರಾಜ್ಯದ ಹೊಸ ಮುಖ್ಯಮಂತ್ರಿ ಯಾರು ಎಂಬ ಕುತೂಹಲ ಹೆಚ್ಚಾಗಿತ್ತು.
ಬಿಜೆಪಿ ಸಾಮಾನ್ಯವಾಗಿ ಮುಖ್ಯಮಂತ್ರಿಯ ಹೆಸರನ್ನು ಕೊನೆಯ ಕ್ಷಣದವರೆಗೂ ರಹಸ್ಯವಾಗಿಡುವ ಪಕ್ಷವಾಗಿರುವುದರಿಂದ ಜನರಲ್ಲಿ ಇನ್ನಷ್ಟು ಆಸಕ್ತಿ ಮೂಡಿದೆ. ಆದರೆ ಈಗಾಗಲೇ ಪಕ್ಷದ ಒಳಗಿನಲ್ಲಿ ಹೊಸ ಮುಖ್ಯಮಂತ್ರಿಯ ಹೆಸರನ್ನು ಬಹುತೇಕ ಅಂತಿಮಗೊಳಿಸಲಾಗಿದೆ ಎಂದು ಮೂಲಗಳು ಹೇಳುತ್ತಿವೆ.
ರಾಜ್ಯದ ಹೊಸ ಮುಖ್ಯಮಂತ್ರಿಯ ಹೆಸರಿನ ಬಗ್ಗೆ ಚರ್ಚೆಗಳು ತೀವ್ರಗೊಂಡ ಬೆನ್ನಲ್ಲೇ ನೂತನ ಮುಖ್ಯಮಂತ್ರಿಯ ಹೆಸರು ಅಂತಿಮಗೊಂಡಿದೆ, ಎಲ್ಲಾ ಗೊಂದಲಗಳಿಗೆ ತೆರೆ ಎಳೆಯಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿದೆ.
ಪಶ್ಚಿಮ ಬಂಗಾಳಕ್ಕೆ ನೂತನ ಮುಖ್ಯಮಂತ್ರಿ ಫೈನಲ್!
ಬಿಜೆಪಿ ವಲಯದಿಂದ ಬಂದ ಮಾಹಿತಿಯ ಪ್ರಕಾರ, ತೃಣಮೂಲ ಕಾಂಗ್ರೆಸ್ನಿಂದ ಬಿಜೆಪಿ ಸೇರಿ, ಈಗ ವಿರೋಧ ಪಕ್ಷದ ನಾಯಕರಾಗಿರುವ ಸುವೇಂದು ಅಧಿಕಾರಿ ಪಶ್ಚಿಮ ಬಂಗಾಳದ ಮುಂದಿನ ಮುಖ್ಯಮಂತ್ರಿಯಾಗುವ ಸಾಧ್ಯತೆ ಹೆಚ್ಚು ಇದೆ. ಪಕ್ಷದ ಶ್ರೇಷ್ಟ ನಾಯಕತ್ವವೂ ಅವರ ಹೆಸರನ್ನು ಒಪ್ಪಿಕೊಂಡಿದೆ ಎಂದು ಹೇಳಲಾಗುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಮೇ 6 ರಂದು ಕೋಲ್ಕತ್ತಾಗೆ ಬರುವ ನಿರೀಕ್ಷೆಯಿದೆ. ಅವರು ಹೊಸದಾಗಿ ಆಯ್ಕೆಯಾದ ಶಾಸಕರ ಜೊತೆ ಸಭೆ ನಡೆಸಿ, ನಂತರ ಸುವೇಂದು ಅಧಿಕಾರಿ ಅವರನ್ನು ಅಧಿಕೃತವಾಗಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸುವ ಸಾಧ್ಯತೆ ಇದೆ.
ಚುನಾವಣಾ ಫಲಿತಾಂಶಗಳ ನಂತರ ಅಮಿತ್ ಶಾ ಅವರನ್ನು ಕೇಂದ್ರ ವೀಕ್ಷಕರಾಗಿ ಹಾಗೂ ಒಡಿಶಾ ಮುಖ್ಯಮಂತ್ರಿ ಮೋಹನ್ ಮಾಂಝಿ ಅವರನ್ನು ಸಹ ವೀಕ್ಷಕರಾಗಿ ನೇಮಿಸಲಾಗಿದೆ. ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಅವರ ಪ್ರಕಾರ, ಮೇ 9 ರಂದು, ಅಂದರೆ ರವೀಂದ್ರನಾಥ ಟ್ಯಾಗೋರ್ ಅವರ ಜನ್ಮ ದಿನದಂದು, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ತನ್ನ ಹೊಸ ಸರ್ಕಾರವನ್ನು ರಚಿಸಲು ಯೋಜಿಸಿದೆ.