ಕೊಲ್ಕತ್ತಾ : ನನ್ನ ಆಪ್ತ ಸಹಾಯಕ ಚಂದ್ರನಾಥ್ ರಥ್ ಹತ್ಯೆಯ ಹಿಂದೆ ಒಂದೇ ಒಂದು ಕಾರಣವಿದೆ, ಅದು ನಾನು ಮಮತಾ ಬ್ಯಾನರ್ಜಿ ಅವರ ಭದ್ರಕೋಟೆಯಾದ ಭವಾನಿಪುರದಲ್ಲಿ ಅವರನ್ನು ಮಣಿಸಿದ್ದು ಎಂದು ಪಶ್ಚಿಮ ಬಂಗಾಳದ ನೂತನ ಶಾಸಕ ಮತ್ತು ಹಿರಿಯ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಗುಡುಗಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸುವೇಂದು ಅಧಿಕಾರಿ, ಈ ಹತ್ಯೆಯು ರಾಜಕೀಯ ಪ್ರೇರಿತ ಮತ್ತು ಉದ್ದೇಶಪೂರ್ವಕ ಟಾರ್ಗೆಟೆಡ್ ಅಸಾಸಿನೇಷನ್ ಎಂದು ಬಣ್ಣಿಸಿದ್ದಾರೆ.
ಇದನ್ನೂ ಓದಿ : ಬಂಗಾಳದ ನೂತನ ಮುಖ್ಯಮಂತ್ರಿಯ ಹೆಸರು ಅಂತಿಮ, ಗೊಂದಲಗಳಿಗೆ ತೆರೆ ಎಳೆದ ಬಿಜೆಪಿ
ಚಂದ್ರನಾಥ್ ರಥ್ ಅವರ ಶವಪರೀಕ್ಷೆ ನಡೆದ ಬಾರಾಸತ್ ಆಸ್ಪತ್ರೆಗೆ ಭೇಟಿ ನೀಡಿದ ಸುವೇಂದು ಅಧಿಕಾರಿ, ತನಿಖೆಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ನಾನು ರಾಜ್ಯ ಡಿಜಿಪಿ ಅವರೊಂದಿಗೆ ಮಾತನಾಡಿದ್ದೇನೆ. ಪೊಲೀಸರಿಗೆ ಪ್ರಮುಖ ಸುಳಿವುಗಳು ಲಭ್ಯವಾಗಿವೆ ಮತ್ತು ಕೆಲವು ಶಂಕಿತರನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣವನ್ನು ಭೇದಿಸಲು ನಮ್ಮ ಪೊಲೀಸರು ಸಮರ್ಥರಿದ್ದಾರೆ. ಆದರೆ ಈ ಹಿಂದೆ ಅವರನ್ನು ಸ್ವತಂತ್ರವಾಗಿ ಕೆಲಸ ಮಾಡಲು ಬಿಡುತ್ತಿರಲಿಲ್ಲ ಎಂದು ಪರೋಕ್ಷವಾಗಿ ತೃಣಮೂಲ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರಕರಣದ ತನಿಖೆಯನ್ನು ಸಿಐಡಿ, ವಿಧಿವಿಜ್ಞಾನ ತಂಡ ಮತ್ತು ವಿಶೇಷ ತನಿಖಾ ದಳ ಜಂಟಿಯಾಗಿ ನಡೆಸುತ್ತಿದ್ದು, ಶೀಘ್ರದಲ್ಲೇ ಹಂತಕರನ್ನು ಬಂಧಿಸುವ ಭರವಸೆಯನ್ನು ಸುವೇಂದು ನೀಡಿದ್ದಾರೆ.
ಹತ್ಯೆಯ ಸಮಯದಲ್ಲಿ ಚಂದ್ರನಾಥ್ ರಥ್ ಅವರ ಕಾರನ್ನು ಚಲಾಯಿಸುತ್ತಿದ್ದ ಬುದ್ಧದೇವ್ ಬೆರಾ ಅವರ ಪರಿಸ್ಥಿತಿ ಈಗಲೂ ಅತ್ಯಂತ ಗಂಭೀರವಾಗಿದೆ. ಗುಂಡಿನ ದಾಳಿಯಿಂದ ತೀವ್ರವಾಗಿ ಗಾಯಗೊಂಡಿರುವ ಬೆರಾ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಸತತ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗಿದ್ದು, ಪ್ರಸ್ತುತ ಅವರು ಐಸಿಯುನಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಇನ್ನು ಈ ಹತ್ಯೆಯ ಬಗ್ಗೆ CBI ತನಿಖೆಯಾಗಬೇಕು ಎಂಬ ತೃಣಮೂಲ ಕಾಂಗ್ರೆಸ್ನ ಬೇಡಿಕೆಯನ್ನು ಸುವೇಂದು ಅಧಿಕಾರಿ ತಳ್ಳಿಹಾಕಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಟಿಎಂಸಿಗೆ ಯಾವುದೇ ಪ್ರಸ್ತುತತೆ ಇಲ್ಲ. ರಾಜ್ಯ ಪೊಲೀಸರೇ ಈ ಪ್ರಕರಣವನ್ನು ಭೇದಿಸಲಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ.