ವಿಜಯಪುರ : ರಾಜ್ಯ ಬಿಜೆಪಿಯಲ್ಲಿ ಮತ್ತೆ ಬಣ ಬಡಿದಾಟ ಮುನ್ನಲೆಗೆ ಬಂದಿದೆ. ಉಚ್ಛಾಟಿತ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಡುವಿನ ವಾಕ್ಸಮರ ಮುಂದುವರೆದಿದೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್ ಅವರು, 2028ಕ್ಕೆ ಬಿಜೆಪಿ ಗೆಲ್ಲುತ್ತೆ ಆದ್ರೆ ವಿಜಯೇಂದ್ರ ಸಿಎಂ ಆಗಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ಕಾಂಗ್ರೆಸ್ ಸರ್ಕಾರ ಏನು ಮಾಡುತ್ತದೋ ಮಾಡಲಿ. ಅವರ ಬಳಿ ಅಧಿಕಾರ ಇದೆ. ಅವರು ಏನು ಮಾಡುತ್ತಾರೋ ಮಾಡಲಿ ಇನ್ನೂ ಎರಡು ವರ್ಷ ಎಷ್ಟು ಹಾರಾಡುತ್ತಾರೆ ಹಾರಾಡಲಿ. ಮುಂದೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಆಗ ಬಿ.ವೈ.ವಿಜಯೇಂದ್ರ ಏನು ಮುಖ್ಯಮಂತ್ರಿ ಆಗಿ ಬರುವುದಿಲ್ಲ ಎಂದರು.
ಇನ್ನೂ ಸತೀಶ್ ಜಾರಕಿಹೊಳಿ ಭವಿಷ್ಯದ ನಾಯಕ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ ಅಂದ್ರೆ ಸಿಎಂ ಸಿದ್ದರಾಮಯ್ಯ ಹೇಳಿದಂತೆ. ಬೆಂಗಳೂರಿನಲ್ಲಿ ಕುಳಿತು ಕಲೆಕ್ಷನ್ ಯಾರು ಮಾಡುತ್ತಿದ್ದಾರೆ. ಯತೀಂದ್ರ ಮತ್ತು ಭೈರತಿ ಸುರೇಶ್ ಇಬ್ಬರು ಕಲೆಕ್ಷನ್ ಮಾಸ್ಟರ್ಗಳು. ಸಿಎಂ ಸಿದ್ದರಾಮಯ್ಯನವರು ಕಲೆಕ್ಷನ್ ಮಾಡಲು ಬಿಟ್ಟಿದ್ದಾರೆ. ಯತೀಂದ್ರ ಏನು ಹೇಳುತ್ತಾರೋ ಅದನ್ನು ಸಿದ್ದರಾಮಯ್ಯ ಹೇಳಿದಂತೆ. ಸತೀಶ್ ಜಾರಕಿಹೊಳಿ ಅಯೋಗ್ಯನಿದ್ದಾನೆ ಎಂದು ಸಿದ್ದರಾಮಯ್ಯ ಹೇಳಲಿ ಅಥವಾ ನನ್ನ ಮಗ ಅಯೋಗ್ಯ ಇದ್ದಾನೆ ಬುದ್ದಿ ಕೆಟ್ಟಿದೆ ಎಂದು ಹೇಳಲಿ ಎಂದು ಯತ್ನಾಳ್ ಸವಾಲ್ ಹಾಕಿದ್ರು.