ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಯಲ್ಲಿರುವ ಕುರ್ಚಿ ಗುದ್ದಾಟದ ನಡುವೆಯೇ ದುಬಾರಿ ವಾಚ್ ವಿವಾದವೊಂದು ಹುಟ್ಟಿಕೊಂಡಿತ್ತು. ಇದೀಗ ಡಿಸಿಎಂ ಡಿ.ಕೆ.ಶಿವಕುಮಾರ್ ಆ ವಾಚ್ ಟೀಕೆಗೆ ಸ್ಪಷ್ಟನೆ ನೀಡಿದ್ದಾರೆ. ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ಡಿಸೆಂಬರ್ 2ರಂದು ನಡೆದ ಬ್ರೇಕ್ ಫಾಸ್ಟ್ ಮೀಟಿಂಗ್ನಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಸೇಟ್ ಟು ಸೇಮ್ ವಾಚ್ ಕಟ್ಟಿ ಗಮನಸೆಳೆದಿದ್ದರು. ಕಾರ್ಟಿಯರ್ ಬ್ರ್ಯಾಂಡ್ ವಾಚ್ ಬೆಲೆ ₹43 ಲಕ್ಷ ರೂಪಾಯಿ ಎಂದು ವರದಿಯಾಗಿತ್ತು. ಇದರ ಬೆನ್ನಲ್ಲೇ ಇಂದು ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ನಾನೇ ₹24 ಲಕ್ಷ ರೂಪಾಯಿ ಕೊಟ್ಟು ಖರೀದಿಸಿದ ವಾಚ್ ಇದು ಎಂದು ಹೇಳುವ ಮೂಲಕ ವಾಚ್ ವಿವಾದಕ್ಕೆ ತೆರೆ ಎಳೆದಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ನನ್ನ ಕೈ ಗಡಿಯಾರ. ನಾನೇ ಖರೀದಿ ಮಾಡಿದ್ದೇನೆ. ನನ್ನ ಕ್ರೆಡಿಟ್ ಕಾರ್ಡ್ ನೀಡಿ ₹24 ಲಕ್ಷ ರೂಪಾಯಿ ಮೌಲ್ಯದ ವಾಚ್ ಖರೀದಿಸಿದ್ದೇನೆ. ಇದರಲ್ಲಿ ಮುಚ್ಚು ಮರೆ ಏನೂ ಇಲ್ಲ. ನನ್ನ ಚುನಾವಣೆ ಅಫಿಡವಿಟ್ನಲ್ಲೂ ಇದನ್ನು ತೋರಿಸಿದ್ದೇನೆ. ನೀವು ಬೇಕಾದರೆ ಪರಿಶೀಲೆನೆ ಮಾಡಬಹುದು ಎಂದರು.
ಇದನ್ನೂ ಓದಿ : ಇದು ಕಾಂಗ್ರೆಸ್ ಬಿಗ್ಬಾಸ್, ಪರಮೇಶ್ವರ್, ಜಾರಕಿಹೊಳಿ ವೈಲ್ಡ್ ಕಾರ್ಡ್ ಎಂಟ್ರಿ: ಆರ್ ಅಶೋಕ್ ವ್ಯಂಗ್ಯ
ಇನ್ನು ದುಬಾರಿ ವಾಚ್ ಕುರಿತು ಸಿದ್ದರಾಮಯ್ಯನವರನ್ನೂ ಟೀಕಿಸಲಾಗುತ್ತಿದೆ ಎಂಬ ಆರೋಪಗಳಿಗೆ ಉತ್ತರಿಸಿದ ಡಿಕೆಶಿ, ಸಿದ್ದರಾಮಯ್ಯರನ್ನು ಬಿಜೆಪಿ ಗುರಿಯಾಗಿಸಿರುವ ವಿಚಾರ ನನಗೆ ಗೊತ್ತಿಲ್ಲ. ಸಿದ್ದರಾಮಯ್ಯನವರಿಗೆ ವಾಚ್ ಹಾಕಿಕೊಳ್ಳುವ ಅಧಿಕಾರ ಇದೆ. ಇಷ್ಟೇ ಅಲ್ಲ ವಾಚ್ ಖರೀದಿಸುವ ತಾಖತ್ತು ಕೂಡ ಇದೆ ಎಂದಿದ್ದಾರೆ. ಮೇಲಾಗಿ ನನ್ನ ತಂದೆ 7 ವಾಚ್ ಬಿಟ್ಟು ಹೋಗಿದ್ದಾರೆ. ಈ ವಾಚ್ಗಳನ್ನು ನಾನು ಅಥವಾ ನನ್ನ ಸಹೋದರ ಹಾಕಿಕೊಳ್ಳಬೇಕು. ಇದರ ಜೊತೆಗೆ ನಾನು ಖರೀದಿಸಿದ ಹಲವು ವಾಚ್ಗಳಿವೆ ಎಂದು ಉತ್ತರ ನೀಡಿದ್ರು.
ಸ್ನೇಹಿತರ ಮದುವೆ ಹಿನ್ನೆಲೆ ದೆಹಲಿಗೆ ಪ್ರಯಾಣ..!
ಸ್ನೇಹಿತರ ಮದುವೆ ಕಾರ್ಯಕ್ರಮದ ನಿಮಿತ್ತ ದೆಹಲಿಗೆ ತೆರಳುತ್ತಿದ್ದೇನೆ. ಡಿಸೆಂಬರ್ 14ರಂದು ವೋಟ್ ಚೋರಿ ವಿರುದ್ಧ ಪ್ರತಿಭಟನೆ ಇದೆ. ಪ್ರತಿ ಜಿಲ್ಲೆಯಿಂದ 300ಜನರನ್ನ ಕರೆದುಕೊಂಡು ಹೋಗೇಕಿದೆ. ಸದ್ಯ ದೆಹಲಿ ಪ್ರವಾಸಸಂಪೂರ್ಣ ಖಾಸಗಿ ಬೇಟಿಯಾಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಇದೇ ವೇಳೆ ಮಂಗಳೂರಿನಲ್ಲಿ ಕೆಸಿ ವೇಣುಗೋಪಾಲ್ ಹಾಗೂ ಸಿದ್ದರಾಮಯ್ಯ ಭೇಟಿ ಕುರಿತು ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ವೇಣುಗೋಪಾಲ್ ಭೇಟಿ ಮಾಡಿದ್ರೆ ತಪ್ಪೇನು. ವೇಣುಗೋಪಾಲ್ ಅವರನ್ನು ಭೇಟಿ ಮಾಡಲಿ, ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲಿ. ಇದರ ನಡುವೆ ಅಭಿಮಾನಿಗಳು ಘೋಷಣೆ ಕೂಗಿರಬಬಹುದು. ಕೆಲವರು ಮೋದಿ ಅಂತಾರೆ, ಕೆಲವರು ಡಿಕೆ ಎನ್ನುತ್ತಾರೆ, ಕೆಲವರು ರಾಹುಲ್ ಅಂತಾರೆ ,ಕೆಲವರು ಸಿದ್ದು ಎನ್ನುತ್ತಾರೆ. ಅದರಲ್ಲಿ ತಪ್ಪೇನು ಎಂದು ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.