ಸ್ಪೀಕರ್ ಯು.ಟಿ‌.ಖಾದರ್ ಈಗ ಲೂಟಿ‌ ಖಾದರ್ ಆಗಿದ್ದಾರೆ; ಕಾಗೇರಿ ಗಂಭೀರ ಅರೋಪ

ಬೆಂಗಳೂರು : ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್‌ ಅವರು ಭಾರೀ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ.ಅವರು ಸಚಿವಾಲಯಕ್ಕೆ ಇತ್ತೀಚೆಗೆ ಖರೀದಿ ಮಾಡಿರುವ ಸಾಮಗ್ರಿಗಳ ಕುರಿತು ತನಿಖೆ ನಡೆಸುವಂತೆ ರಾಜ್ಯಪಾಲರಿಗೆ ದೂರು ನೀಡಲಾಗುವುದು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಗಂಭಿರ ಆರೋಪ ಮಾಡಿದ್ದಾರೆ.

ನಗರದ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯು.ಟಿ.ಖಾದರ್‌ ಇತ್ತೀಚೆಗೆ ಲೂಟಿ ಖಾದರ್‌ ಆಗಿದ್ದಾರೆ. ಅವರ ಘನತೆಗೆ, ಸ್ಥಾನಮಾನಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿಲ್ಲ. ಪ್ರತಿಯೊಂದು ನಡವಳಿಕೆಯೂ ಸಂಶಯಕ್ಕೆ ಎಡೆ ಮಾಡಿಕೊಡುತ್ತಿದ್ದು, ಇದರ ಬಗ್ಗೆ ತನಿಖೆಯ ಅಗತ್ಯವಿದೆ. ವಿಧಾನಸಭೆಯ ಇತಿಹಾಸದಲ್ಲೇ ಸ್ಪೀಕರ್‌ ಮೇಲೆ ಇಂಥ ಆರೋಪಗಳು ಮೊದಲ ಬಾರಿಗೆ ಬಂದಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕರ್ನಾಟಕ ವಿಧಾನಸಭೆಗೆ ತನ್ನದೇ ಆದ ಗೌರವ ಇದೆ. ಆದರೆ ಖಾದರ್‌ ಅವರು ತಮ್ಮ ಪೀಠದ ಗೌರವವನ್ನು ಕಾಪಾಡುತ್ತಿಲ್ಲ, ಅವರು ಪಕ್ಷದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಇದು ಹಲವು ಶಾಸಕರ ಅಭಿಮತವೂ ಹೌದು! ಇದಲ್ಲದೆ ಅವರ ಆಡಳಿತ ಸುಧಾರಣೆ ಹೆಸರಿನಲ್ಲಿ ಮಾಡುತ್ತಿರುವ ಕಾರ್ಯವೈಖರಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ದೂರಿದರು.

ಶಾಸಕರಿಗೆ ಮಸಾಜ್ ಚೇರ್‌ಗಳು ಬೇಕಿತ್ತಾ..?

ವಿಧಾನಸೌಧದ ಸಭಾಂಗಣದ ಬಾಗಿಲಿಗೆ ರೋಸ್‌‍ವುಡ್‌ ಹಾಕಿದ್ದು, ಹೊಸ ಟಿವಿ ಖರೀದಿ, ಶಾಸಕರ ಮಸಾಜ್‌ ಚೇರ್‌‌ಗಳು, ಗಂಡಬೇರುಂಢ ಗಡಿಯಾರ, ಊಟ ಉಪಹಾರ.. ಹೀಗೆ ಹಲವು ವಿಚಾರಗಳು ಭ್ರಷ್ಟಾಚಾರದ ಆರೋಪಕ್ಕೆ ಪುಷ್ಟಿ ನೀಡಿವೆ ಎಂದರು. ಸ್ವಜನ ಪಕ್ಷಪಾತದ ಆರೋಪ ಅವರ ಮೇಲಿದೆ. ಅವರು ಏನೇ ಮಾಡಿದರೂ ಅದರೊಳಗೆ ಇನ್ನೇನೋ ಇದೆ ಎಂಬ ಅನುಮಾನ ಬರುವಂತೆ ಮಾಡಿದೆ. ಶಾಸಕರ ಭವನದ ಶಾಸಕ ಕೊಠಡಿಗೆ ಹಾಕಿದ ಸ್ಮಾರ್ಟ್‌ ಡೋರ್‌ ಲಾಕ್‌, ಸೇಫ್ಟೀಲಾಕರ್‌ ಅಳವಡಿಕೆಗೆ ಮಾಡಿರುವ ವೆಚ್ಚವೂ ಅನುಮಾನಾಸ್ಪದವೇ ಎಂದು ಆರೋಪಿಸಿದರು.

ಮುಂದುವರೆದು ಮಾತನಾಡಿದ ಅವರು, 7-8 ಸಾವಿರ ರೂಪಾಯಿಗೆ ಸಿಗುವ ಸಾಮಾಗ್ರಿಗಳೊಗೆ 30-40 ಸಾವಿರ ಬಿಲ್‌ ಮಾಡಿಸಿದ್ದಾರೆ. ಇವೆಲ್ಲವೂ ಸ್ಪೀಕರ್‌ ಮೇಲಿನ ಭ್ರಷ್ಟಾಚಾರಕ್ಕೆ ಸಾಕ್ಷಿಗಳಾಗಿವೆ.‌ ಸ್ಪೀಕರ್‌ ವಿದೇಶಿ ಅಧ್ಯಯನ ಪ್ರವಾಸದ ವಿಚಾರ ಬಹಿರಂಗವಾಗಬೇಕು. ವಿಧಾನಸೌಧಕ್ಕೆ, ಅವರ ಕಚೇರಿಗೆ ಮಾಡಿದ ಪೀಠೋಪಕರಣ, ಸಿಬ್ಬಂದಿ ನೇಮಕ ವಿಚಾರದಲ್ಲೂ ಅಕ್ರಮದ ವಾಸನೆಯಿದೆ ಎಂದು ಅನುಮಾನ ವ್ಯಕ್ತಪಡಿಸಿದರು. ನಾನು ಇದನ್ನೆಲ್ಲಾ ಖಾದರ್‌ ಮೇಲಿನ ವೈಯುಕ್ತಿಕ ದ್ವೇಷದಿಂದ ಮಾತನಾಡುತ್ತಿಲ್ಲ. ಇದು ಪೀಠದ ಗೌರವದ ಕಾರಣಕ್ಕೆ ಈ ವಿಚಾರವನ್ನು ಜನರ ಮುಂದಿಡುತ್ತಿದ್ದೇನೆ. ಈ ಕಳಂಕದ ಹಿನ್ನೆಲೆಯಲ್ಲಿ ಈ ಕುರಿತು ನ್ಯಾಯಾಧೀಶರಿಂದ ತನಿಖೆಯಾಗಬೇಕಿದೆ ಎಂದು ಒತ್ತಾಯಿಸಿದರು.ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರೋತ್ಸಾಹ ಮಾಡಿದ್ದಾರೆ ಎಂಬ ಆರೋಪವಿದೆ.

ಇದಕ್ಕೆ ಅವರು ಸ್ಪಷ್ಟನೆ ನೀಡಬೇಕು. ಹಾಗೆಯೇ ಈ ಎಲ್ಲ ಕೆಲಸಗಳಿಗೂ 4ಜಿ ವಿನಾಯ್ತಿ ತೆಗೆದುಕೊಂಡಿದ್ದಾರೆ. ಅಂತಹ ತುರ್ತಿನ ಕಾರ್ಯ ಇಲ್ಲೇನಿದೆ. ರಾಜ್ಯ ಸಂಕಷ್ಟದಲ್ಲಿ ಇರುವಾಗ ಈ ಬದಲಾವಣೆ ಸೌಲಭ್ಯ ಒದಗಿಸುವ ಅವಶ್ಯಕತೆ ಇದೆಯೇ? ಎಂದು ಪ್ರಶ್ನೆ ಮಾಡಿದರು.ಸ್ಪೀಕರ್‌ ಸ್ಥಾನವನ್ನ ಮಾಹಿತಿ ಹಕ್ಕು ಕಾಯ್ದೆ(ಆರ್‌ಟಿಐ) ವ್ಯಾಪ್ತಿಗೆ ತರಬೇಕು ಎಂಬ ಆಗ್ರಹ ಇದೆ. ಇದಕ್ಕೆ ನನ್ನ ಸಹಮತವೂ ಇದೆ. ಆ ಮೂಲಕ ಈ ವ್ಯವಸ್ಥೆಯು ಪಾರದರ್ಶಕತೆ ಕಾಣುವಂತಾಗಲಿ ಎಂದು ಹೇಳಿದರು.

ಇನ್ನು ಸಭಾಧ್ಯಕ್ಷರ ಭ್ರಷ್ಟಾಚಾರದ ವಿಚಾರವನ್ನು ರಾಜ್ಯಪಾಲರ ಗಮನಕ್ಕೆ ಪತ್ರ ಮೂಲಕ ತರುತ್ತೇನೆ. ಯು ಟಿ ಖಾದರ್‌ ಈಗ ಲೂಟಿ ಖಾದರ್‌ ಎಂಬ ಹಂತಕ್ಕೆ ತಲುಪಿದ್ದಾರೆ ಎಂದು ಜನರೇ ಆರೋಪ ಮಾಡುತ್ತಿದ್ದಾರೆ. ಇವೆಲ್ಲದಕ್ಕೂ ಖಾದರ್‌ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.

Leave a Reply

Your email address will not be published. Required fields are marked *