ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಅಧಿಕಾರ ಬದಲಾವಣೆಯ ಚರ್ಚೆಗಳು ಕಳೆದ ಎರಡು ತಿಂಗಳಿನಿಂದ ಜೋರಾಗಿಯೇ ನಡೆಯುತ್ತಿವೆ. ಅದರಲ್ಲೂ ಮಾಜಿ ಸಚಿವ ಕೆ.ಎನ್.ರಾಜಣ್ಣ ನೀಡಿದ್ದ ನವೆಂಬರ್ ಕ್ರಾಂತಿ ಎಂಬ ಹೇಳಿಕೆಯನ್ನಿಟ್ಟುಕೊಂಡು ಪ್ರತಿಪಕ್ಷಗಳು ಸಿಎಂ ಸಿದ್ದರಾಮಯ್ಯ ನವೆಂಬರ್‌ನಲ್ಲಿ ಪವರ್ ಕಳೆದುಕೊಳ್ಳಲಿದ್ದಾರೆ ಎಂಬ ಟೀಕೆಗಳನ್ನು ಮಾಡುತ್ತಲೆ ಬಂದಿವೆ.
ಇದೇ ವಿಚಾರವಾಗಿ ಮಂಗಳೂರಿನಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ ಹೈಕಮಾಂಡ್ ಒಪ್ಪಿದರೆ ಐದು ವರ್ಷ ನಾನೇ ಸಿಎಂ ಎಂದು ಹೇಳಿಕೆಯನ್ನೂ ಸಹ ನೀಡಿದ್ದರು. ಹೀಗೆ ಮಹತ್ವದ ಬೆಳವಣಿಗೆಗಳು ನಡೆಯುತ್ತಿರುವಾಗಲೇ ಖಾಸಗೀ ಟಿವಿಯೊಂದರ ಸಂವಾದದಲ್ಲಿ ಪಾಲ್ಗೊಂಡ ಕೆ.ಎನ್.ರಾಜಣ್ಣ ಡಿ.ಕೆ.ಶಿವಕುಮಾರ್ ವಿರುದ್ಧ ಹೇಳಿಕೆಯನ್ನು ನೀಡಿ ರಾಜ್ಯ ರಾಜಕಾರಣದಲ್ಲಿ ಮತ್ತೆ ಸಂಚಲನ ಸೃಷ್ಠಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಹೆಸರು ಮುನ್ನೆಲೆಗೆ ಬಂದು ಅವನ ಹಣೆಯಲ್ಲಿ ಬರೆದಿದ್ದರೆ ಸಿಎಂ ಆಗಲಿ ನಮ್ಮದೇನು ಅಭ್ಯಂತರ ಇಲ್ಲ. ಆದರೆ ಕಾಂಗ್ರೆಸ್ ಕಚೇರಿಗಳಿಗೆ ದೊಡ್ಡದೊಂದು ಬೀಗ ರೆಡಿ ಮಾಡಿ ಹಾಕಬೇಕಾಗುತ್ತದೆ. ಇದನ್ನು ನಾನು ಹೇಳುತ್ತಿಲ್ಲ ಜನರೇ ಹೇಳುತ್ತಾ ಇದ್ದಾರ. ಯಾರೇ ಮುಖ್ಯಮಂತ್ರಿಯಾಗಬೇಕು, ಉಪ ಮುಖ್ಯಮಂತ್ರಿಯಾಗಬೇಕು ಎಂದರೆ ಅದನ್ನು ದೆಹಲಿಯ ಹೈಕಮಾಂಡ್‌ನವರೇ ತೀರ್ಮಾನ ಮಾಡುತ್ತಾರೆ ಹೊರತು ಇಲ್ಲಿನವರು ತೀರ್ಮಾನ ಮಾಡುವುದಿಲ್ಲ. ಅದು ಬಿಜೆಪಿಯಾದರೂ ಅಷ್ಟೇ, ಕಾಂಗ್ರೆಸ್ ಪಕ್ಷವಾದರೂ ಅಷ್ಟೇ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದರು.
ಇನ್ನು ಡಿಕೆಶಿ ಸಿಎಂ ಆದರೆ ಅವರ ಸಚಿವ ಸಂಪುಟದಲ್ಲಿ ಸ್ಥಾನ ಸಿಗುವುದು ಕಷ್ಟ ಎಂಬುದರ ಬಗ್ಗೆಯೂ ಸಹ ಮಾತನಾಡಿದ ರಾಜಣ್ಣ ನಾನು ಅದರ ಬಗ್ಗೆ ಯಾವುದೇ ನಿರೀಕ್ಷೆಯನ್ನೂ ಸಹ ಇಟ್ಟುಕೊಂಡಿಲ್ಲ ಎಂದು ನೇರವಾಗಿ ಕಡ್ಡಿ ತುಂಡುಮಾಡಿದಂತೆ ಹೇಳಿದರು.