ನವದೆಹಲಿ : ದೀಪಾವಳಿ ಹಬ್ಬದ ಪ್ರಯುಕ್ತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಳೆ ದೆಹಲಿಯ ಪ್ರಖ್ಯಾತ ಘಂಟೆವಾಲಾ ಸ್ವೀಟ್ ಶಾಪ್ಗೆ ತೆರಳಿ ತಮ್ಮ ಕೈಯಿಂದ ಇಮರ್ತಿ ಮತ್ತು ಬೇಸನ್ ಲಡ್ಡು ತಯಾರಿಸಿದ್ದಾರೆ. ಈ ಸಿಹಿ ತಿಂಡಿ ತಯಾರಿಕೆಯ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಜನರಿಗೆ ವಿಶೇಷವಾಗಿ ಶುಭ ಕೋರಿದ್ದಾರೆ.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ದೀಪಾವಳಿಯ ನಿಜವಾದ ಮಾಧುರ್ಯ ಥಾಲಿಯಲ್ಲಿ ಮಾತ್ರವಲ್ಲ, ಸಂಬಂಧಗಳು ಮತ್ತು ಸಮುದಾಯದಲ್ಲಿಯೂ ಇದೆ. ಹಳೆಯ ದೆಹಲಿಯ ಪ್ರಸಿದ್ಧ ಮತ್ತು ಐತಿಹಾಸಿಕ ಘಂಟೆವಾಲಾ ಸಿಹಿ ಅಂಗಡಿಯಲ್ಲಿ ಇಮಾರ್ತಿ ಮತ್ತು ಬೇಸನ್ ಲಡ್ಡೂ ತಯಾರಿಸಲು ನಾನು ಪ್ರಯತ್ನಿಸಿದೆ ಎಂದು ಬರೆದುಕೊಂಡಿದ್ದಾರೆ.
ಶತಮಾನದ ಹಳೆಯದಾದ ಈ ಐತಿಹಾಸಿಕ ಅಂಗಡಿ ಅದೇ ಸಿಹಿ, ಶುದ್ಧತೆ, ಸಂಪ್ರದಾಯ ಮತ್ತು ಹೃದಯ ಪೂರ್ವಕವಾದ ಹೆಜ್ಜೆಗುರುತನ್ನು ಹೊಂದಿದೆ ಎಂದಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ನಿಮ್ಮ ದೀಪಾವಳಿಯನ್ನು ಹೇಗೆ ವಿಶೇಷವಾಗಿ ಸಂಭ್ರಮಿಸಿದ್ದೀರಿ ಅಂತಲೂ ಕೇಳಿದ್ದಾರೆ. ಇದಕ್ಕೆ ಮುನ್ನ ಪೋಸ್ಟ್ ಮಾಡಿರುವ ಲೋಕಸಭಾ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ದೇಶದ ಜನರಿಗೆ ದೀಪಾವಳಿಯ ಶುಭ ಕೋರಿದ್ದಾರೆ. ಭಾರತವು ಆನಂದದ ದೀಪಗಳಿಂದ ಬೆಳಗಲಿ, ಸಂತೋಷ, ಸಮೃದ್ಧಿ ಮತ್ತು ಪ್ರೀತಿಯ ಬೆಳಕು ಪ್ರತಿಯೊಂದು ಮನೆಯಲ್ಲೂ ಹರಡಲಿ ಎಂದು ತಿಳಿಸಿದ್ದಾರೆ.
ಇನ್ನು ಬೇಸಿನ್ ಲಡ್ಡು ತಯಾರಿಕೆಯಲ್ಲಿ ತೊಡಗಿದ್ದ ರಾಹುಲ್ ಗಾಂಧಿ ಅವರೊಂದಿಗೆ ಮಾತನಾಡಿದ ಅಂಗಡಿ ಮಾಲೀಕ, ನಿಮ್ಮ ಅಜ್ಜಿ- ತಾತ ಹಾಗೂ ಕುಟುಂಬದ ಸದಸ್ಯರಿಗೆ ತಾವು ಸಿಹಿ ಹಂಚಿದ್ದೇವೆ. ಇದೀಗ ನಿಮ್ಮ ಮದುವೆಗೆ ಸಿಹಿ ಪೂರೈಕೆಗೆ ಕಾದು ಕುಳಿತಿದ್ದು, ಯಾವಾಗ ಎಂದು ಪ್ರಶ್ನಿಸಿದ್ದಕ್ಕೆ ರಾಹುಲ್ ಗಾಂಧಿ ನಕ್ಕು ಸುಮ್ಮನಾದರು.