ದೆಹಲಿಯಲ್ಲಿ ಅಧಿಕಾರಕ್ಕಾಗಿ ಡಿಕೆ ಸಹೋದರರ ಬಿಗಿಪಟ್ಟು, ಆಪ್ತರ ಜೊತೆ ಸಿದ್ದು ಸಭೆ, ಮೇ ತಿಂಗಳಲ್ಲಿ ಕ್ಲೈಮ್ಯಾಕ್ಸ್!

ದೆಹಲಿ : ಸಿಎಂ ಪಟ್ಟಕ್ಕೆ ಪಟ್ಟು ಹಿಡಿದಿರುವ ಡಿ.ಕೆ.ಶಿವಕುಮಾರ್ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.

ದಾವಣಗೆರೆ ಉಪ ಚುನಾವಣೆ ಬಳಿಕ ರಾಜ್ಯ ಕಾಂಗ್ರೆಸ್‌ನಲ್ಲಿ ನಾನಾ ಬೆಳವಣಿಗೆಗಳು ನಡೆಯುತ್ತಿವೆ. ಅತ್ತ ಕೆಪಿಸಿಸಿ ಅಧ್ಯಕ್ಷ ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿಯಲ್ಲಿ ಹೈ ಕಮಾಂಡ್ ನಾಯಕರ ಭೇಟಿಯಲ್ಲಿ ಮಗ್ನರಾಗಿದ್ದರೆ. ಇತ್ತ ಸಿಎಂ ಸಿದ್ದರಾಮಯ್ಯ ಕೂಡ ಆಪ್ತ ಸಚಿವರೊಟ್ಟಿಗೆ ಸಭೆ ನಡೆಸಿದ್ದಾರೆ. ಶಿವಕುಮಾರ್ ಅವರೊಂದಿಗೆ ಅವರ ಸಹೋದರ ಮತ್ತು ಮಾಜಿ ಸಂಸದ ಡಿ.ಕೆ.ಸುರೇಶ್ ಇದ್ದು, 40 ನಿಮಿಷಗಳಿಗೂ ಹೆಚ್ಚು ಕಾಲ ರಹಸ್ಯ ಸಭೆ ನಡೆ ನಡೆಸಿದ್ದಾರೆ ಎನ್ನಲಾಗಿದೆ.

ಇನ್ನು ಡಿಕೆಶಿ ಚುನಾವಣಾ ಫಲಿತಾಂಶ ಬರುವ ದಿನವಾದ ಮೇ 4 ರವರೆಗೆ ಕಾಯುವುದು ಮತ್ತಷ್ಟು ತಡವಾಗುತ್ತೆ ಎಂಬ ಲೆಕ್ಕಾಚಾರದಲ್ಲಿದ್ದಾರೆ. ಸದ್ಯ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಮುಗಿದಿದೆ.ಇದರ ಬೆನ್ನಲ್ಲೇ, ಕೇಂದ್ರ ಸಚಿವರನ್ನು ಭೇಟಿ ಮಾಡುವ ಕಾರಣ ನೀಡಿ ದೆಹಲಿಗೆ ಬಂದಿರುವ ಶಿವಕುಮಾರ್ ಅವರು ಅಧಿಕಾರ ಹಸ್ತಾಂತರದ ಬಗ್ಗೆ ಮತ್ತೆ ಒತ್ತಡ ಹೇರುವ ಪ್ರಯತ್ನ ಮುಂದುವರಿಸಿದ್ದಾರೆ.

ಇದನ್ನೂ ಓದಿ : ರಾಜ್ಯ ಕಾಂಗ್ರೆಸ್​​ನಲ್ಲಿ ಮಹತ್ವದ ಬೆಳವಣಿಗೆ, ಕುತೂಹಲ ಮೂಡಿಸಿದ ಅತ್ಯಾಪ್ತರ ಜೊತೆಗಿನ ಸಿಎಂ ಸಭೆ
ಪಂಚ ರಾಜ್ಯಗಳ ಫಲಿತಾಂಶ ಪ್ರಕಟಕ್ಕೆ ಮುನ್ನವೇ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಹೈಕಮಾಂಡ್‌ ನಾಯಕರ ಮೇಲೆ ಒತ್ತಡ ಹೇರಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕರೆಸಿ ಮನವೊಲಿಸಬೇಕು ಎಂದೂ ಹೇಳಿದ್ದಾರೆ ಎನ್ನಲಾಗಿದೆ. ಎರಡೂವರೆ ವರ್ಷದ ಬಳಿಕ ಅಧಿಕಾರ ಹಸ್ತಾಂತರ ಆಗಲಿದೆ ಎಂದು ಹೈಕಮಾಂಡ್‌ ನನಗೆ ಭರವಸೆ ನೀಡಿತ್ತು. ಉಭಯ ನಾಯಕರನ್ನು ಕರೆಸಿ ಬಿಕ್ಕಟ್ಟು ಬಗೆಹರಿಸುವುದಾಗಿ ಹೈಕಮಾಂಡ್‌ ಆರು ತಿಂಗಳ ಹಿಂದೆ ಭರವಸೆ ನೀಡಿತ್ತು. ದೆಹಲಿಯಲ್ಲಿ ಮಾತುಕತೆಗೆ ಮೂರು ಸಲ ದಿನಾಂಕ ನಿಗದಿ ಮಾಡಲಾಗಿತ್ತು. ವಿಶೇಷ ಅಧಿವೇಶನ ಮತ್ತಿತರ ನೆಪ ಹೇಳಿ ಮುಖ್ಯಮಂತ್ರಿಯವರು ದೆಹಲಿಗೆ ಬರಲಿಲ್ಲ.

ನಂತರ ಪಂಚ ರಾಜ್ಯಗಳ ಚುನಾವಣಾ ವೇಳಾಪಟ್ಟಿ ಪ್ರಕಟವಾಯಿತು. ಹೈಕಮಾಂಡ್‌ ನಿರ್ದೇಶನದ ಪ್ರಕಾರ, ಅಸ್ಸಾಂ, ಕೇರಳ ಹಾಗೂ ತಮಿಳುನಾಡಿನಲ್ಲಿ ಪಕ್ಷದ ಪರವಾಗಿ ಕೆಲಸ ಮಾಡಿದ್ದೇನೆ. ಇದೀಗ ಚುನಾವಣೆ ಮುಗಿದಿದೆ. ಅಧಿಕಾರ ಹಸ್ತಾಂತರದ ಬಗ್ಗೆ ಹೈಕಮಾಂಡ್‌ ಕೂಡಲೇ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಶಿವಕುಮಾರ್‌ ಆಗ್ರಹಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಒಟ್ಟಾರೆ ಮೇ ಅಂತ್ಯದೊಳಗೆ ಈ ವಿಚಾರವಾಗಿ ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ ಎನ್ನಲಾಗ್ತಿದೆ.

Leave a Reply

Your email address will not be published. Required fields are marked *