ಸಿಎಂ ಬದಲಾವಣೆ ಗೊಂದಲದ ನಡುವೆ ‘ದಲಿತ ಶಕ್ತಿ’ ಪ್ರದರ್ಶನಕ್ಕೆ ಮುಹೂರ್ತ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಅಧಿಕಾರ ಬದಲಾವಣೆಯೇ ಸದ್ಯಕ್ಕೆ ಹಾಟ್ ಟಾಪಿಕ್. ಸರ್ಕಾರಕ್ಕೆ ಎರಡೂವರೆ ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಬದಲಾವಣೆ ಆಗಲಿದೆ ಎಂಬ ಚರ್ಚೆಗಳು ಮುನ್ನೆಲೆಗೆ ಬಂದಿದೆ. ಒಂದು ವೇಳೆ ಸಿದ್ದರಾಮಯ್ಯ ರಾಜೀನಾಮೆ ನೀಡಿದರೆ ಮುಂದೆ ರಾಜ್ಯದ ಚುಕ್ಕಾಣಿ‌ ಹಿಡಿಯೋರ್ಯಾರು ಅನ್ನೋ ಚರ್ಚೆ ಜೋರಾಗಿದೆ. ಸದ್ಯ ರೇಸ್‌ನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಮುಂದಿದ್ದಾರೆ. ಈ ಚರ್ಚೆಗಳ ನಡುವೆ ದಲಿತ ಸಿಎಂ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಕಾಂಗ್ರೆಸ್‌ನಲ್ಲಿರುವ ಹಿರಿಯ ದಲಿತ ನಾಯಕರು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದು, ಶೀಘ್ರದಲ್ಲೇ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲು ಸಿದ್ಧತೆ ನಡೆಸುತ್ತಿದ್ದಾರೆ.

ಪರಂ-ಮಾದೇವಪ್ಪ ರಹಸ್ಯ ಮಾತುಕತೆ..!
ಸಿಎಂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ಸಿದ್ದರಾಮಯ್ಯ ಅವರ ಉತ್ತರಾಧಿಕಾರಿ ಸತೀಶ್ ಜಾರಕಿಹೊಳಿ ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ದಲಿತ ನಾಯಕರು ಚುರುಕಾಗಿದ್ದಾರೆ. ಕರ್ನಾಟಕದಲ್ಲಿ ದಲಿತ ಸಿಎಂ ಬೇಕು ಎಂಬ ಕೂಗು ಸಾಕಷ್ಟು ವರ್ಷಗಳಿಂದ ಕೇಳಿ ಬರುತ್ತಿದೆ. ಆದರೆ ಈವರೆಗೆ ಯಾರಿಗೂ ಅವಕಾಶ ಸಿಕ್ಕಿರಲಿಲ್ಲ. ಆದರೆ ಇದೀಗ ಒಂದು ವೇಳೆ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟರೆ ದಲಿತ ಸಮುದಾಯಕ್ಕೆ ಸಿಎಂ ಸ್ಥಾನ ಸಿಗಬೇಕು ಎಂಬ ಆಗ್ರಹಗಳು ಶುರುವಾಗಿದೆ.

ಈ ಹಿನ್ನೆಲೆಯಲ್ಲಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಚಿವ ಡಾ. ಎಚ್ ಸಿ ಮಹದೇವಪ್ಪ ಅವರು ರಹಸ್ಯ ಸಭೆಯನ್ನು ನಡೆಸಿದ್ದಾರೆ. ಮಂಗಳವಾರ ಪರಮೇಶ್ವರ್ ಅವರು ಮಹದೇವಪ್ಪ ಅವರ ನಿವಾಸಕ್ಕೆ ಆಗಮಿಸಿ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸಿದ್ದರು. ಆದರೆ ಇದು ಬೇರೆ ವಿಚಾರಕ್ಕೆ ನಡೆದ ಭೇಟಿ ಎಂದು ಸಮರ್ಥನೆ ನೀಡಿದರೂ ಅಸಲಿ ಉದ್ದೇಶ ದಲಿತ ಸಿಎಂ ಬೇಡಿಕೆ ಇಡುವುದಾಗಿದೆ ಎಂಬ ಚರ್ಚೆಗಳು ನಡೆಯುತ್ತಿವೆ.

ಇದನ್ನೂ ಓದಿ : ನಮ್ಮ ಅಣ್ಣನನ್ನ ಸಿಎಂ ಮಾಡಬೇಕು ಎಂಬ ಆಸೆ ನನಗೂ ಇದೆ, ಆದ್ರೆ…

ದಲಿತ ಸಿಎಂ ವಿಚಾರವನ್ನು ಮುಂದಿಟ್ಟುಕೊಂಡು ದಲಿತ ಶಾಸಕರು, ಸಚಿವರ ಸಭೆಯನ್ನು ಹಮ್ಮಿಕೊಳ್ಳಲು ಈ ಹಿಂದೆ ಸಿದ್ಧತೆ ಮಾಡಲಾಗಿತ್ತು. ಆದರೆ, ಇದಕ್ಕೆ ಹೈಕಮಾಂಡ್ ಅನುಮತಿ ನೀಡಿರಲಿಲ್ಲ. ಡಾ.ಜಿ ಪರಮೇಶ್ವರ್ ಅವರು ಅವರು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿ ಮಾಡಿದ್ದ ಸಂದರ್ಭದಲ್ಲಿ ದಲಿತ ಶಾಸಕರು, ಸಚಿವರ ಸಭೆ ಸದ್ಯಕ್ಕೆ ಬೇಡ ಎಂದು ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಭೆ ರದ್ದುಗೊಂಡಿತ್ತು. ಆದರೆ ಇದೀಗ ಮತ್ತೊಮ್ಮೆ ಸಿಎಂ ಬದಲಾವಣೆ ಚರ್ಚೆ ಬಂದ ಸಂದರ್ಭದಲ್ಲಿ ದಲಿತ ಸಮುದಾಯದ ಸಚಿವರು, ಶಾಸಕರು ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ದಲಿತ ಸಮಾವೇಶವನ್ನು ಬೆಂಗಳೂರು ಅಥವಾ ತುಮಕೂರಿನಲ್ಲಿ ಹಮ್ಮಿಕೊಳ್ಳಲು ನಿರ್ಧಾರ ಮಾಡಲಾಗಿದೆ.

Leave a Reply

Your email address will not be published. Required fields are marked *