ಕಾಂಗ್ರೆಸ್ ಸರ್ಕಾರ ಈಗ ICU ನಲ್ಲೂ ಇಲ್ಲ, ಸತ್ತು ಹೋಗಿದೆ

ಗುಂಡ್ಲುಪೇಟೆ : ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ ಈಗ ಐಸಿಯುನಲ್ಲೂ ಇಲ್ಲ. ಅದು ಸತ್ತು ಹೋಗಿದೆ. ಸಿಎಂ ಹುದ್ದೆಗಾಗಿ ಕಾಂಗ್ರೆಸ್‌ನಲ್ಲೇ ಕಿತ್ತಾಟ ಶುರುವಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್‌ ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದ್ದಾರೆ.

ಗುಂಡ್ಲುಪೇಟೆ ತಾಲೂಕಿನ ಕಲ್ಕಟ್ಟೆ ಜಲಾಶಯದ ಬಳಿ ಮಂಡಲ ಬಿಜೆಪಿ ಆಯೋಜಿಸಿದ್ದ ಕೆರೆ ನೀರಿಗಾಗಿ ಬಿಜೆಪಿ ಕಾಲ್ನಡಿಗೆ ಜಾಥಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಮನೆಗೆ ಹೋಗೋಕೂ ಮುಂಚೆ ಕೆರೆಗೆ ನೀರನ್ನಾದರೂ ತುಂಬಿಸಿ ಹೋಗಲಿ. ರೈತರು ಹಾಗೂ ಬಿಜೆಪಿಯ ಹೋರಾಟದ ಫಲದಿಂದಾಗಿಯೇ ಕೆರೆಗಳಿಗೆ ನೀರು ಬರುತ್ತಿದೆ. ಜಿಲ್ಲಾಡಳಿತ ವಿಳಂಬ ಮಾಡಿದರೆ ಜಿಲ್ಲಾಧಿಕಾರಿ ಕಚೇರಿ, ವಿಧಾನ ಸೌಧಕ್ಕೆ ಮುತ್ತಿಗೆ ಹಾಕೋಣ. ರೈತರು ಕೆರೆ ನೀರು ತುಂಬಿಸಿ ಎಂದು ಹೋರಾಟ ಮಾಡಬೇಕಾ? ಇದಕ್ಕಾ ಇರೋದು ಸರ್ಕಾರ ಎಂದು ಜಾಡಿಸಿದರು.

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ 2 ಸಾವಿರ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೆ, ರಾಜ್ಯದಲ್ಲಿ ವೈನ್‌ ಶಾಪ್‌, ಬಾರ್‌ಗಳು ಹೆಚ್ಚಾಗುತ್ತಿವೆ. ಜೊತೆಗೆ ಇಂತಿಷ್ಟು ಅಂತ ಫಿಕ್ಸ್‌ ಆಗಿದೆ ಎಂದು ಆರೋಪಿಸಿದರು. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬಂದು ಎರಡೂವರೆ ವರ್ಷಗಳಾಗುತ್ತಿದೆ. ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಗುಂಡಿ ಬಿದ್ದ ರಸ್ತೆಗಳು, ರೈತರ ಗೋಳನ್ನು ಕೇಳೋರಿಲ್ಲ. ಖಜಾನೆ ಲೂಟಿ ಹೊಡೆದು ಬಿಹಾರ ಚುನಾವಣೆಗೆ ಹಣ ನೀಡಲಾಗುತ್ತಿದೆ. ಜೊತೆಗೆ, ಮುಂದಿನ ದಿನಗಳಲ್ಲಿ ಬರುವ ತಮಿಳುನಾಡು ಚುನಾವಣೆಗೂ ರಾಜ್ಯದಿಂದ ಹಣ ಹೋಗಲಿದೆ ಎಂದು ಆರೋಪಿಸಿದರು.

ನವೆಂಬರ್ ಕ್ರಾಂತಿಯಾಗಿ ಸಿದ್ದರಾಮಯ್ಯ ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು ನಾನು ಹೇಳಿದ್ದ ಭವಿಷ್ಯ ನಿಜವಾಗುತ್ತಿದೆ. ಸಿದ್ದರಾಮಯ್ಯ ರಾಜೀನಾಮೆ ನೀಡಿ ಗಂಟು ಮೂಟೆ ಕಟ್ಟಲು ಸಿದ್ದರಾಗಿದ್ದಾರೆ ಎಂದು ಟೀಕಿಸಿದರು. ಶಾಸಕ ಛಲವಾದಿ ನಾರಾಯಣ ಸ್ವಾಮಿ, ಮೈಸೂರು-ಕೊಡಗು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಮತ್ತಿತರ ನಾಯಕರು ಜಾಥಾದಲ್ಲಿ ಪಾಲ್ಗೊಂಡಿದ್ದರು

Leave a Reply

Your email address will not be published. Required fields are marked *