ಆಪರೇಷನ್ ಸಿಂಧೂರ್ ಕೇವಲ ಟ್ರೈಲರ್, ಇಡೀ ಪಾಕಿಸ್ತಾನ ಬ್ರಹ್ಮೋಸ್‌ನ ವ್ಯಾಪ್ತಿಯಲ್ಲಿದೆ

ಲಕ್ನೋ : ಆಪರೇಷನ್ ಸಿಂಧೂರ್ ಕೇವಲ ಟ್ರೈಲರ್ ಅಷ್ಟೇ ಆಗಿತ್ತು. ಪಾಕಿಸ್ತಾನದ ಸಂಪೂರ್ಣ ಪ್ರದೇಶವು ಬ್ರಹ್ಮೋಸ್‌ನ ವ್ಯಾಪ್ತಿಯಲ್ಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪಾಕಿಸ್ತಾನಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ.

ಲಕ್ನೋದ ಬ್ರಹ್ಮೋಸ್ ಏರೋಸ್ಪೇಸ್ ಘಟಕದಿಂದ ಸೂಪರ್‌ಸಾನಿಕ್ ಬ್ರಹ್ಮೋಸ್ ಕ್ಷಿಪಣಿಗಳ ಮೊದಲ ಬ್ಯಾಚ್‌ಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ. ಭಾರತವು ಇನ್ನು ಮುಂದೆ ಕೇವಲ ಗ್ರಾಹಕನಲ್ಲ, ಬದಲಾಗಿ ರಕ್ಷಣಾ ತಂತ್ರಜ್ಞಾನದ ಉತ್ಪಾದಕ ಎಂಬುದಕ್ಕೆ ಬ್ರಹ್ಮೋಸ್ ಸಾಕ್ಷಿಯಾಗಿವೆ. ಆಪರೇಷನ್ ಸಿಂಧೂರ್‌ನಲ್ಲಿ ಬ್ರಹ್ಮೋಸ್‌ನ ಯಶಸ್ಸು ನಮ್ಮ ಕ್ಷಿಪಣಿಗಳು ಕೇವಲ ಪರೀಕ್ಷೆಯಲ್ಲ, ಬದಲಾಗಿ ಶಕ್ತಿಯ ಪ್ರಾಯೋಗಿಕ ಪುರಾವೆಯಾಗಿದೆ ಎಂಬುದನ್ನ ಸಾಬೀತುಪಡಿಸಿವೆ. ಆಪರೇಷನ್ ಸಿಂಧೂರ್ ಕೇವಲ ಟ್ರೈಲರ್ ಆಗಿತ್ತು. ಪಾಕಿಸ್ತಾನದ ಸಂಪೂರ್ಣ ಪ್ರದೇಶವು ಬ್ರಹ್ಮೋಸ್‌ನ ವ್ಯಾಪ್ತಿಯಲ್ಲಿದೆ. ಗೆಲುವು ಇನ್ನು ಮುಂದೆ ಭಾರತಕ್ಕೆ ಒಂದು ಘಟನೆಯಲ್ಲ, ಬದಲಿಗೆ ಅಭ್ಯಾಸವಾಗಿದೆ. ಅದನ್ನು ಮತ್ತಷ್ಟು ಬಲಪಡಿಸಬೇಕು ಎಂದರು.

ಈ ಘಟಕವು ಕೇವಲ ಐದು ತಿಂಗಳಲ್ಲಿ ತನ್ನ ಮೊದಲ ಉತ್ಪಾದನಾ ಗುರಿಯನ್ನು ಪೂರ್ಣಗೊಳಿಸಿದೆ. ಇದು ಭಾರತದ ರಕ್ಷಣಾ ಉತ್ಪಾದನಾ ವಲಯಕ್ಕೆ ಹೊಸ ದಾಖಲೆಯನ್ನು ಸ್ಥಾಪಿಸಿದೆ. ಈ ಘಟಕವು ವರ್ಷಕ್ಕೆ 80 ರಿಂದ 100 ಬ್ರಹ್ಮೋಸ್ ಕ್ಷಿಪಣಿಗಳನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯು ಉತ್ತರ ಪ್ರದೇಶದ ರಕ್ಷಣಾ ಕೈಗಾರಿಕಾ ಕಾರಿಡಾರ್‌ನ ಆರು ನೋಡ್‌ಗಳಲ್ಲಿ ಒಂದಾಗಿದೆ, ಇದನ್ನು ಲಕ್ನೋದಲ್ಲಿ ವಿಶೇಷವಾಗಿ ಅಭಿವೃದ್ಧಿಪಡಿಸಲಾಗಿದೆ ಎಂದರು.

ಇನ್ನು ಬ್ರಹ್ಮೋಸ್ ಇನ್ನು ಮುಂದೆ ಕೇವಲ ಕ್ಷಿಪಣಿಯಲ್ಲ, ಬದಲಾಗಿ ಭಾರತದ ಬೆಳೆಯುತ್ತಿರುವ ಸ್ಥಳೀಯ ಮಿಲಿಟರಿ ಸಾಮರ್ಥ್ಯದ ಸಂಕೇತವಾಗಿದೆ. ಸಾಂಪ್ರದಾಯಿಕ ಸಿಡಿತಲೆ, ಸುಧಾರಿತ ಮಾರ್ಗದರ್ಶನ ವ್ಯವಸ್ಥೆ ಮತ್ತು ಸೂಪರ್ಸಾನಿಕ್ ವೇಗದ ಸಂಯೋಜನೆಯು ಇದನ್ನು ವಿಶ್ವದ ಅತ್ಯುತ್ತಮ ಕ್ಷಿಪಣಿಗಳಲ್ಲಿ ಒಂದನ್ನಾಗಿ ಮಾಡಿದೆ. ಬ್ರಹ್ಮೋಸ್ ಈಗ ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಬೆನ್ನೆಲುಬಾಗಿದೆ. ಬ್ರಹ್ಮೋಸ್ ಎಂಬ ಹೆಸರು ದೇಶದ ನಾಗರಿಕರಲ್ಲಿ ನಂಬಿಕೆ ಮತ್ತು ಹೆಮ್ಮೆಯ ಭಾವನೆಯನ್ನು ತುಂಬುತ್ತದೆ ಎಂದರು.

Leave a Reply

Your email address will not be published. Required fields are marked *