‘ಹೈಕಮಾಂಡ್ ನಮಗೆ ಬಾಯಿ ಮುಚ್ಚಿಕೊಂಡಿರಿ ಅಂದ್ದಾರೆ, ನವೆಂಬರ್‌ ಕ್ರಾಂತಿ ಬಗ್ಗೆ ಮಾತಾಡಲ್ಲ’

ಚಾಮರಾಜನಗರ : ಸಿಎಂ ಸ್ಥಾನ ಬದಲಾವಣೆ, ಸಂಪುಟ ಪುನರ್‌ರಚನೆ ಎಲ್ಲವೂ ವರಿಷ್ಠರ ತೀರ್ಮಾನ. ವರಿಷ್ಠರು ಬಾಯಿ ಮುಚ್ಕೊಂಡು ಇರಿ ಎಂದಿದ್ದಾರೆ. ಅವಕಾಶ ಕೊಟ್ಟಾಗ ಕೆಲಸ ಮಾಡಬೇಕು. ಅವಕಾಶ ಇಲ್ಲದಿದ್ದಾಗ ಪಕ್ಷಕ್ಕಾಗಿ ದುಡಿಯುವುದು ಕಾಂಗ್ರೆಸ್ ಸಿದ್ಧಾಂತ. ವರಿಷ್ಠರು ಬಾಯಿ ಮುಚ್ಕೊಂಡಿರಿ ಅಂದಿದ್ದಾರೆ. ನೀವೆಷ್ಟು ಕೇಳಿದರೂ ಇದೇ ಉತ್ತರ ಎಂದು ಸಚಿವ ಮಧು ಬಂಗಾರಪ್ಪ ಹೇಳಕೆ ನೀಡದ್ದಾರೆ.

ಕೊಳ್ಳೆಗಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ನವೆಂಬರ್‌ ಕ್ರಾಂತಿ, ಸಿಎಂ ಬದಲಾವಣೆ, ಸಂಪುಟ ಪುನರ್‌ರಚನೆ ಇವೆಲ್ಲ ವರಿಷ್ಠರ ತೀರ್ಮಾನ. ನಮಗೆ ವರಿಷ್ಠರು ಬಾಯಿ ಮುಚ್ಕೊಂಡು ಇರಿ ಎಂದಿದ್ದಾರೆ. ಆ ವಿಚಾರದ ಬಗ್ಗೆ ನಾನು ಏನೂ ಮಾತಾಡಲ್ಲ ಎಂದರು. ಕಳೆದ ಬಾರಿಯಿಂದ ಎಸ್ಎಸ್ಎಲ್‌ಸಿಗೆ ಮೂರು ಪರೀಕ್ಷೆ ನಡೆಸಲಾಗುತ್ತಿದೆ, ಅದರಲ್ಲೂ ನಪಾಸದ ವಿದ್ಯಾರ್ಥಿಗಳಿಗೆ 20 ದಿನದೊಳಗೆ ಪರೀಕ್ಷೆ ಬರೆಯಲು ಅವಕಾಶ ಕೊಡಲಾಗಿದೆ. ಈ ಹಿಂದೆ ಪೂರಕ ಪರೀಕ್ಷೆ ಇತ್ತು. ಆದರೆ ಈಗ ಪೂರಕ ಪರೀಕ್ಷೆ ಇಲ್ಲ. ಯಾವುದೇ ವಿದ್ಯಾರ್ಥಿಗಳಿಂದ ಶುಲ್ಕ ಪಡೆಯದೇ ಹೆಚ್ಚುವರಿ ಪರೀಕ್ಷೆ ಬರೆಯಲು ಅವಕಾಶ ಕೊಡಲಾಗುತ್ತಿದೆ ಎಂದರು. ರಾಜ್ಯ ಸರ್ಕಾರದ ಪರೀಕ್ಷಾ ವಿಧಾನವನ್ನು ಕೇಂದ್ರ ಸರ್ಕಾರ ಕಾಪಿ ಮಾಡಿದೆ, ಸಿಬಿಎಸ್ಇ, ಐಸಿಎಸ್ಇಯಲ್ಲೂ ರಾಜ್ಯದ ಪರೀಕ್ಷೆ ವಿಧಾನ ಅಳವಡಿಸಿಕೊಂಡಿದ್ದಾರೆ, ನಮ್ಮ ಗ್ಯಾರಂಟಿಗಳನ್ನು ಕಾಪಿ ಮಾಡಿದಂತೆ ಇದನ್ನು ಕಾಪಿ ಮಾಡಿದ್ದಾರೆಂದು ಸಚಿವ ಮಧು ಬಂಗಾರಪ್ಪ ಹೇಳಿದರು.

ರಾಜ್ಯದ ಸಾಮಾಜಿಕ, ಆರ್ಥಿಕ ಸಮೀಕ್ಷೆಯನ್ನು ಬಿಜೆಪಿ ನಾಯಕರು ವಿರೋಧಿಸುತ್ತಿರುವುದು, ಇದಕ್ಕೆ ಸಹಕಾರ ಕೊಡಬೇಡಿ ಎಂದು ಕರೆ ನೀಡುವುದು ಸಂವಿಧಾನ ವಿರೋಧಿ ಕೆಲಸ. ಸಂವಿಧಾನಾತ್ಮಕವಾಗಿ ನಡೆಯುತ್ತಿರುವ ಸಮೀಕ್ಷೆಯ ಬಗ್ಗೆ ದಾರಿ ತಪ್ಪಿಸುವ ಕೆಲಸ ಖಂಡನೀಯ ಎಂದು ತೀವ್ರವಾಗಿ ಖಂಡಿಸಿದ್ದಾರೆ. ಸಮೀಕ್ಷೆಯನ್ನು ವಿರೋಧಿಸುತ್ತಿರುವ ಬಿಜೆಪಿ ನಾಯಕರಾದ ಪ್ರಹ್ಲಾದ್ ಜೋಶಿ, ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯ, ಅಶ್ವತ್ಥ ನಾರಾಯಣ ಮತ್ತು ಆರ್. ಅಶೋಕ್ ಅವರ ಹೆಸರನ್ನು ಉಲ್ಲೇಖಿಸಿ ವಾಗ್ದಾಳಿ ನಡೆಸಿದರು.

ಇನ್ನು 1951ರಲ್ಲಿ ಸಂವಿಧಾನ ತಿದ್ದುಪಡಿ ಮಾಡುವ ಮೂಲಕ ಸಾಮಾಜಿಕ, ಆರ್ಥಿಕ ಸಮೀಕ್ಷೆ ನಡೆಸುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಲಾಗಿದೆ. ಆದರೆ ಸಂವಿಧಾನದ ಮೇಲೆ ಶಪಥ ಮಾಡಿ ಅಧಿಕಾರಕ್ಕೇರಿದ ಬಿಜೆಪಿ ನಾಯಕರು ಯಾವ ಆಧಾರದಲ್ಲಿ ಈ ಸಮೀಕ್ಷೆಯನ್ನು ವಿರೋಧಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು.ಬಿಜೆಪಿಯ ಹಿರಿಯ ನಾಯಕ ಯಡಿಯೂರಪ್ಪ ಮತ್ತು ಜೆಡಿಎಸ್‌ನ ದೇವೇಗೌಡರಂಥ ಪಕ್ವ ನಾಯಕರು ಸಮೀಕ್ಷೆ ವಿರೋಧಿಸಿ ಯಾವುದೇ ಹೇಳಿಕೆ ನೀಡಿಲ್ಲ. ಅವರಿಗೆ ಇದರ ಹಿಂದಿನ ಉದ್ದೇಶ ಸ್ಪಷ್ಟವಾಗಿದೆ. ಇದನ್ನು ಉಳಿದವರು ಅರ್ಥ ಮಾಡಿಕೊಳ್ಳಬೇಕು ಎಂದು ಮಧು ಬಂಗಾರಪ್ಪ ಹೇಳಿದರು.

Leave a Reply

Your email address will not be published. Required fields are marked *