‘ಯಾರ ಮಾತಿಗೂ ಕಿಮ್ಮತ್ತಿಲ್ಲ, ನಾನು ಸಿಎಂ ಏನು ಮಾತಾಡಿದ್ದೀವೋ ಅದೇ ಮಾತು’

ಬೆಂಗಳೂರು: ಟನಲ್ ರಸ್ತೆ ವಿಚಾರವಾಗಿ ವಿಪಕ್ಷ ನಾಯಕ ಆರ್. ಅಶೋಕ್ ಅವರ ನೇತೃತ್ವದಲ್ಲಿಯೇ ಸಮಿತಿ ರಚನೆ ಮಾಡಲು ನಾನು ತಯಾರಿದ್ದೇನೆ. ಅವರು ಸೂಚಿಸಿದ ಕಡೆಯೇ ಲಾಲ್‌ಬಾಗ್ ಬಳಿ ಪ್ರವೇಶ- ನಿರ್ಗಮನ ತಾಣ ರೂಪಿಸಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ನಗರದ ಕಂಠೀರವ ಕ್ರೀಡಾಂಗಣದ‌ ಬಳಿ ಮಾತನಾಡಿದ ಅವರು, ಅಶೋಕ್ ಅವರು ಧರಣಿ ಕೂರುವ ಅವಶ್ಯಕತೆಯಿಲ್ಲ. ಯಾಕೆಂದ್ರೆ ಅವರು ಬೆಂಗಳೂರಿನವರು. ಇಲ್ಲಿಂದ ಏಳೆಂಟು ಬಾರಿ ಗೆದ್ದಿದ್ದಾರೆ. ಅವರಿಗೂ ಜವಾಬ್ದಾರಿಯಿದೆ. ಅವರ ನೇತೃತ್ವದಲ್ಲಿ ರಚಿಸಿದ ಸಮಿತಿಯೇ ಸರ್ಕಾರಕ್ಕೆ ಸಲಹೆ, ನಿರ್ದೇಶನ ನೀಡಲಿ. ಟನಲ್ ಯೋಜನೆಯನ್ನು ಅವರೂ ಗಮನಿಸಲಿ. ಅಶ್ವತ್ಥ್ ನಾರಾಯಣ್ ಸೇರಿ ಬೇರೆ ಯಾರ ಹೆಸರನ್ನು ಸೂಚಿಸಿದರು ಅವರನ್ನು ಈ ಸಮಿತಿಗೆ ಸೇರ್ಪಡೆ ಮಾಡಲಾಗುವುದು.‌ ನಾವೆಲ್ಲರೂ ಒಟ್ಟಿಗೆ ಸೇರಿ ಕೆಲಸ ಮಾಡಬೇಕು, ಮಾಡೋಣ. ನಾನು ಶುಕ್ರವಾರ ರಾತ್ರಿ ಲಾಲ್‌ಬಾಗ್ ಬಳಿ ತೆರಳಿ ಎಲ್ಲೆಲ್ಲಿ ಟನಲ್ ರಸ್ತೆಗೆ ಪ್ರವೇಶ ಕಲ್ಪಿಸಬಹುದು ಎಂದು ಪರಿಶೀಲನೆ ಮಾಡಿದ್ದೇನೆ. ಪರ್ಯಾಯ ಮಾರ್ಗಗಳ ಬಗ್ಗೆ ಆಲೋಚನೆ ನಡೆಸುತ್ತಿದ್ದೇನೆ. ಯಾವುದೇ ಆತಂಕ ಪಡಬೇಕಾದ ಅವಶ್ಯಕತೆ ಇಲ್ಲ ಎಂದರು.

ಇಲ್ಲಿ ಮಿಕ್ಕ ಯಾರ ಮಾತಿಗೂ ಕಿಮ್ಮತ್ತಿಲ್ಲ..!
ಬಳಿಕ ನವೆಂಬರ್ ಕ್ರಾಂತಿ ವಿಚಾರವಾಗಿ ಮಾತನಾಡಿ, ನಾನು ಹಾಗೂ ಮುಖ್ಯಮಂತ್ರಿಯವರು ಏನು ಮಾತನಾಡಿದ್ದೇವೆಯೋ ಅದು ಮಾತ್ರ ಮಾತು. ಮಿಕ್ಕ ಯಾರ ಮಾತಿಗೂ ಕಿಮ್ಮತ್ತಿಲ್ಲ ಎಂದರು. ಇನ್ನು ಕಾಂಗ್ರೆಸ್‌ನಲ್ಲಿ ಒಮ್ಮತ ಇದಿಯಾ ಎಂಬ ಪ್ರಶ್ನೆಗೆ ಉತ್ತರಿಸಿ, ಒಮ್ಮತದಲ್ಲಿ ಇರುವ ಕಾರಣಕ್ಕೇ 136 ಕ್ಷೇತ್ರ ಗೆದ್ದು 140 ಕ್ಕೆ ನಮ್ಮ ಬಲ‌ ಹೆಚ್ಚಿರುವುದು. ಮುಂದುವರೆದು ಮಾತನಾಡಿದ ಅವರು, ಎಂಇಎಸ್‌ ನವರನ್ನು ಪರಿವರ್ತಿಸುವ ಕೆಲಸ ನಾವು ಮಾಡೋಣ. ಕರ್ನಾಟಕದಲ್ಲಿ ಒಂದು ಪಕ್ಷ, ಗುಂಪಾಗಿ‌ ಅದು ಕೆಲಸ‌ ಮಾಡುತ್ತಿದೆ. ಅವರೂ ಸಹ ಕನ್ನಡಿಗರೇ. ಅವರೂ ಸಹ ಕರ್ನಾಟಕ ವಿಧಾನಸಭೆಗೆ ಪ್ರವೇಶ ಮಾಡಿದ್ದಾರೆ. ಕರ್ನಾಟಕದಲ್ಲಿ ಇರಬೇಕು ಎಂದರೆ ಕನ್ನಡಿಗರಾಗಿ ಇರಬೇಕು. ಕರ್ನಾಟಕದಲ್ಲಿ ಇರುವವರು ಕಡ್ಡಾಯವಾಗಿ ಕನ್ನಡ ಕಲಿಯಬೇಕು, ಮಾತನಾಡಬೇಕು. ಈ ನಾಡಿನಲ್ಲಿ ಬದುಕುವವರು ಕನ್ನಡದ ಬೆಳವಣಿಗೆಗೆ ಸಹಕಾರ ನೀಡಬೇಕು. ಇತರೇ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿ ಗೃಹಸಚಿವರಿಗೆ ಇರುತ್ತದೆ. ಅವರು ಮಾಹಿತಿ ನೀಡುತ್ತಾರೆ ಎಂದರು.

Leave a Reply

Your email address will not be published. Required fields are marked *