ಬೆಂಗಳೂರು : RSS ಬ್ಯಾನ್ ಮಾಡುವಂತೆ ಸಚಿವ ಪ್ರಿಯಾಂಕ್ ಖರ್ಗೆ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದ ಬೆನ್ನಲ್ಲೇ ಇಂದು ಕ್ಯಾಬಿನೆಟ್ನಲ್ಲಿ ಮಹತ್ವದ ಚರ್ಚೆ ನಡೆದಿದೆ. ಈ ವೇಳೆ ರಾಜ್ಯ ಕಾಂಗ್ರೆಸ್ ಸರ್ಕಾರ ಆರ್ಎಸ್ಎಸ್ ಬ್ಯಾನ್ ಮಾಡುವ ಬಗ್ಗೆ ಆದೇಶ ಹೊರಡಿಸಿದೆ. ಆರ್‌ಎಸ್ಎಸ್ ಹೆಸರು ಉಲ್ಲೇಖಿಸದೆ ನಿಯಮ ಜಾರಿಗೆ ಮುಂದಾಗಿರುವ ಸರ್ಕಾರ, ಪರೋಕ್ಷವಾಗಿ ಆರ್‌ಎಸ್ಎಸ್‌ಗೆ ಅಂಕುಶ ಹಾಕಿದೆ. ಕರ್ನಾಟಕದ ಕೆಲವು ರಾಜ್ಯ ಸರ್ಕಾರಿ ನೌಕರರು RSS ಪಥಸಂಚಲನದಲ್ಲಿ ಭಾಗವಹಿಸಿರುವ ವಿಷಯವು ರಾಜ್ಯ ಸರ್ಕಾರದ ಸಂಪುಟದಲ್ಲಿ ಬಿರುಸಿನ ಚರ್ಚೆಗೆ ಕಾರಣವಾಗಿದ್ದು, ಇದೀಗ ಆರ್ಎಸ್ಎಸ್ ಹೆಸರು ಉಲ್ಲೇಖಿಸದೇ ನಿಯಮ ಜಾರಿ ಮಾಡಿದೆ.
ಸರ್ಕಾರಿ ಆಸ್ತಿಗಳಲ್ಲಿ ಖಾಸಗಿ ಸಂಘಟನೆಗಳ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಕರ್ನಾಟಕ ಸರ್ಕಾರ ಹೊಸ ನಿಯಮ ಜಾರಿಗೆ ತೀರ್ಮಾನಿಸಿದೆ. ಈ ನಿರ್ಧಾರವು ಆರ್‌ಎಸ್‌ಎಸ್‌ಗೆ ಪರೋಕ್ಷವಾಗಿ ಅಂಕುಶ ಹೇರಲಿದ್ದು, ಸರ್ಕಾರಿ ಶಾಲೆ, ಕಾಲೇಜು, ಆವರಣ ಮತ್ತು ಸ್ವತ್ತುಗಳ ಬಳಕೆಗೆ ಪೂರ್ವಾನುಮತಿಯನ್ನು ಕಡ್ಡಾಯಗೊಳಿಸಲಿದೆ. ಈ ವಿಷಯವು ರಾಜಕೀಯವಾಗಿ ಸೂಕ್ಷ್ಮವಾಗಿದ್ದರೂ, ಸರ್ಕಾರ ಆರ್‌ಎಸ್‌ಎಸ್ ಹೆಸರನ್ನು ನೇರವಾಗಿ ಉಲ್ಲೇಖಿಸದೆ ನಿಯಮವಾಗಿ ಜಾರಿಗೊಳಿಸಲು ಮುಂದಾಗಿದೆ.
2013ರಲ್ಲಿ ಬಿಜೆಪಿ ಸರ್ಕಾರದ ಆದೇಶವನ್ನೇ ಸರ್ಕಾರ ಈಗ ಬ್ರಹ್ಮಾಸ್ತ್ರವಾಗಿ ಬಳಸಿದೆ. ಆಗಿನ ಬಿಜೆಪಿ ಸರ್ಕಾರವು ಸರ್ಕಾರಿ ಆಸ್ತಿಗಳ ಬಳಕೆಗೆ ಕೆಲವು ಮಾರ್ಗಸೂಚಿಗಳನ್ನು ರೂಪಿಸಿತ್ತು. ಈಗ ಕಾಂಗ್ರೆಸ್ ಸರ್ಕಾರ ಆ ಆದೇಶವನ್ನು ಆಧರಿಸಿ, ಹೊಸ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸುತ್ತಿದೆ. ಈ ಕ್ರಮವು ಸರ್ಕಾರಿ ಆವರಣದಲ್ಲಿ ರಾಜಕೀಯ ಅಥವಾ ಸಂಘಟನೆಯ ಚಟುವಟಿಕೆಗಳನ್ನು ನಿಯಂತ್ರಿಸಲು ಮುಂದಾಗಿದೆ.