ಬೆಂಗಳೂರು : ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ರಸ್ತೆ ಗುಂಡಿ ಸೇರಿದಂತೆ ಕಸದ ಬಗ್ಗೆ ಉದ್ಯಮಿಗಳಾದ ಕಿರಣ್ ಮಜುಂದಾರ್ ಶಾ ಮತ್ತು ಮೋಹನ್ ದಾಸ್ ಪೈ ಸೇರಿ ಹಲವರು ಕಿಡಿಕಾರಿದ್ದರು. ರಾಜ್ಯ ಸರ್ಕಾರದ ವಿರುದ್ಧ ಉದ್ಯಮಿಗಳು ಟ್ವೀಟ್‌ನಲ್ಲೇ ಆಕ್ರೋಶ ವ್ಯಕ್ತಪಡಿಸಿದ್ದರು. ಸರ್ಕಾರ ಟಿಕಿಸಿದ್ದಕ್ಕೆ ಪ್ರತಿಯಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಸಹ ಪರೋಕ್ಷವಾಗಿ ಉದ್ಯಮಿಗಳಿಗೆ ಟಾಂಗ್ ನೀಡಿದ್ದರು. ಈ ಮಧ್ಯೆ ಇದೀಗ ಇಂದು ಉದ್ಯಮಿ ಕಿರಣ್ ಮಜುಂದಾರ್ ಶಾ ಅವರು ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಸಾಕಷ್ಟು ಟೀಕೆ, ಪ್ರತಿಟೀಕೆಗಳ ಬೆನ್ನಲ್ಲೇ ಭೇಟಿ ಮಾಡಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಹೌದು.. ಬೆಂಗಳೂರಿನ ರಸ್ತೆಗುಂಡಿಗಳ ಬಗ್ಗೆ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದರು. ಇದರ ಬೆನ್ನಲ್ಲೇ ಮೋಹನ್‌ದಾಸ್ ಪೈ ಕೂಡ ರಸ್ತೆ ಗುಂಡಿ ಹಾಗೂ ಕಸದ ಸಮಸ್ಯೆ ಬಗ್ಗೆ ಪ್ರಶ್ನೆ ಮಾಡಿದ್ದರು. ಈ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಕೂಡ ಕೆಂಡಕಾರಿದ್ದರು. ಇದೆಲ್ಲದರ ಮಧ್ಯೆ ಕಿರಣ್ ಮಜುಂದಾರ್ ಶಾ ಅವರು ಡಿಸಿಎಂ ಡಿಕೆ ಶಿವಕುಮಾರ್ರನ್ನು ಭೇಟಿ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಡಿಸಿಎಂ ಡಿಕೆ ಶಿವಕುಮಾರ್, ಇಂದು ನನ್ನ ನಿವಾಸದಲ್ಲಿ ಉದ್ಯಮಿ ಮತ್ತು ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರನ್ನು ಭೇಟಿ ಮಾಡಿ ಸಂತೋಷವಾಯಿತು. ಬೆಂಗಳೂರು ಸೇರಿದಮತೆ ಕರ್ನಾಟಕದ ಬೆಳವಣಿಗೆಯ ಮುಂದಿನ ಹಾದಿ ಬಗ್ಗೆ ಚರ್ಚಿಸಿರುವುದಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಇನ್ನು ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿರುವ ಕಿರಣ್ ಮಜುಂದಾರ್ ಶಾ, ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದಾರೆ. ಈ ವೇಳೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಉಪಸ್ಥಿತರಿದ್ದದ್ದು ಕಂಡುಬಂದಿದೆ.