RSS ಸಂಘರ್ಷದ ಬೆನ್ನಲ್ಲೇ ಕೋಮುಗಲಭೆ ನಿಗ್ರಹಕ್ಕೆ ಮಸೂದೆ ತರ್ತೀವಿ ಎಂದ ಸಿದ್ದು..!

ಪುತ್ತೂರು : ಆರ್‌ಎಸ್‌ಎಸ್‌ ಸಂಘರ್ಷದ ಬೆನ್ನಲ್ಲೇ ರಾಜ್ಯದಲ್ಲಿ ಕೋಮುಗಲಭೆ ನಿಗ್ರಹಕ್ಕೆ ಮಸೂದೆ ತರಲಾಗುವುದು. ರಾಜ್ಯದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವವರು, ಅಪಪ್ರಚಾರ ಮಾಡುವವರು ಮತ್ತು ಸುಳ್ಳು ಹೇಳುವವರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಮಸೂದೆಯನ್ನು ಜಾರಿಗೆ ತರಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಪುತ್ತೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ-ಧರ್ಮದ ಹೆಸರಿನಲ್ಲಿ ಕಚ್ಚಾಟ ನಡೆಸುವುದರಲ್ಲಿ ದಕ್ಷಿಣ ಕನ್ನಡ ಜಿಲ್ಲೆ ನಂಬರ್ 1 ಆಗಿತ್ತು. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಜಿಲ್ಲೆಯ ಪೊಲೀಸ್ ಅಧಿಕಾರಿಗಳನ್ನು ಬದಲಾವಣೆ ಮಾಡಿದ್ದು, ಇದಕ್ಕೆ ಕಡಿವಾಣ ಹಾಕಲು ಜಿಲ್ಲೆಗೆ ದಕ್ಷ ಅಧಿಕಾರಿಗಳನ್ನು ನೇಮಿಸಲಾಗಿದೆ. ಕೋಮು ಸೌಹಾರ್ದತೆಗೆ ಧಕ್ಕೆ ತರುವವರು, ಅಪಪ್ರಚಾರ ಮಾಡುವವರು ಮತ್ತು ಸುಳ್ಳು ಹೇಳುವವರ ವಿರುದ್ಧ ಕಾನೂನು ಕ್ರಮಕ್ಕಾಗಿ ಮಸೂದೆ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು. ಸಮ ಸಮಾಜ ನಿರ್ಮಾಣ ಸಂವಿಧಾನದ ಆಶಯವಾಗಿದೆ. ಉಳ್ಳವರು ಇಲ್ಲದವರಿಗೆ ಹಂಚಬೇಕು. ಇದನ್ನು 12ನೇ ಶತಮಾನದಲ್ಲಿ ಬಸವಣ್ಣನವರು ಕಾಯಕ ದಾಸೋಹ ಮೂಲಕ ತಿಳಿಸಿದ್ದು, ಉತ್ಪಾದಿಸಿದ್ದನ್ನು ಹಂಚಿಕೊಂಡು ತಿನ್ನಬೇಕು. ಇದು ಸಮ ಸಮಾಜಕ್ಕೆ ಪೂರಕವಾಗಿದೆ. ನಮ್ಮ ಸರ್ಕಾರದ ಧ್ಯೇಯವೂ ಇದೇ ಆಗಿದೆ. ಶಾಸಕ ಅಶೋಕ್ ಕುಮಾರ್ ರೈ ಅವರು ಜನಮನ ಕಾರ್ಯಕ್ರಮದ ಮೂಲಕ ಈ ಕಾರ್ಯ ನಡೆಸುತ್ತಿದ್ದಾರೆ ಎಂದು ಶ್ಲಾಘಿಸಿದರು.

ನಮ್ಮಲ್ಲಿ ಅಸಮಾನತೆ ಮತ್ತು ಸಾಮಾಜಿಕ ತಾರತಮ್ಯ ಸಾಕಷ್ಟಿದೆ. ಸಂವಿಧಾನ ಎಲ್ಲರಿಗೂ ಅರ್ಥವಾದಾಗ ಸಮ ಸಮಾಜ ನಿರ್ಮಾಣ ಸಾಧ್ಯವಿದೆ. ಅದಕ್ಕಾಗಿ ಪ್ರತಿಯೊಂದು ಶಾಲೆಗಳಲ್ಲಿ ಸಂವಿಧಾನ ಪೀಠಿಕೆ ಓದುವ ಕೆಲಸ ಮಾಡಲಾಗುತ್ತಿದೆ ಎಂದರು. ಯಾವುದೇ ಧರ್ಮವೂ ಪರಸ್ಪರ ದ್ವೇಷ ಮಾಡುವಂತೆ ಹೇಳುವುದಿಲ್ಲ. ಧರ್ಮವು ಪ್ರತಿಯೊಬ್ಬರನ್ನು ಪ್ರೀತಿಸಲು ತಿಳಿಸುತ್ತದೆ. ನಮ್ಮಲ್ಲಿರುವ ಅಸಮಾನತೆಗಳ ಬಗ್ಗೆ ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ಕುವೆಂಪು ಅವರು ಹೇಳುವ ಸರ್ವ ಜನಾಂಗದ ಶಾಂತಿಯ ತೋಟವಾಗಬೇಕು. ಸಹಿಷ್ಣುತೆ ಮತ್ತು ಸಹಬಾಳ್ವೆಯ ಕುರಿತು ಸಂವಿಧಾನದ ಆಶಯವನ್ನು ಪ್ರತಿಯೊಬ್ಬರು ಎತ್ತಿ ಹಿಡಿದಾಗ ಮಾತ್ರ ಸಂವಿಧಾನದ ರಕ್ಷಣೆ ಸಾಧ್ಯವಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *