ಬೆಂಗಳೂರು : ಕರ್ನಾಟಕದಿಂದ ಆಯ್ಕೆಯಾದ 19 ಬಿಜೆಪಿ ಸಂಸದರು ದೆಹಲಿಯಲ್ಲಿ ಇಂಡಿಯಾ ಗೇಟ್ ಕಾಯಲು ಇದ್ದಾರಾ
ಕೇಂದ್ರ ಸರ್ಕಾರ ನೀಡಿರುವ ನೆರೆಪರಿಹಾರದಲ್ಲಿ ತಾರತಮ್ಯ ಎಸಗಿದೆ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್, ರಾಜ್ಯದ ಬಿಜೆಪಿ ಸಂಸದರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಹಲವು ಭಾಗಗಳಲ್ಲಿ ಭಾರಿ ಮಳೆಯಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಸಾವಿರಾರು ಕೋಟಿ ರೂಪಾಯಿ ನಷ್ಟ ಸಂಭವಿಸಿದ್ದು, ರಾಜ್ಯ ಸರ್ಕಾರ ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಿತ್ತು. ಆದ್ರೆ, ಕೇಂದ್ರ ಸರ್ಕಾರವು ಮಹಾರಾಷ್ಟ್ರಕ್ಕೆ ₹1556 ಕೋಟಿ ರೂಪಾಯಿ ಪರಿಹಾರ ಬಿಡುಗಡೆ ಮಾಡಿದ್ದು, ಕರ್ನಾಟಕಕ್ಕೆ ಕೇವಲ ₹384 ಕೋಟಿ ರೂಪಾಯಿಗಳನ್ನು ನೀಡಿದೆ. ಈ ಅಲ್ಪ ಮೊತ್ತವನ್ನೇ ದೊಡ್ಡ ಸಾಧನೆ ಎಂಬಂತೆ ಬಿಜೆಪಿ ನಾಯಕ ಆರ್. ಅಶೋಕ ಅವರು ಟ್ವೀಟ್ ಮಾಡಿದ್ದಾರೆ. ಇದು ರಾಜ್ಯಕ್ಕೆ ಮಾಡಿದ ಅವಮಾನ. ಬಿಜೆಪಿ ಸರ್ಕಾರಕ್ಕೆ ರಾಜ್ಯದ ಜನರ ಮೇಲೆ ಎಷ್ಟು ಪ್ರೀತಿ ಇದೆ ಎಂಬುದು ಇದರಿಂದಲೇ ತಿಳಿಯುತ್ತದೆ ಎಂದರು.
ಇನ್ನು ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡ ಪ್ರದೀಪ್ ಈಶ್ವರ್, ನಾವು ರಾಜ್ಯದ ಪರವಾಗಿ ಪರಿಹಾರ ಕೇಳಿದರೆ, ಆರ್. ಅಶೋಕ್ ಅವರು ಕಾಂಗ್ರೆಸ್ ಸಂಸದರನ್ನು ಕೇಳಿ ಎನ್ನುತ್ತಾರೆ. ಹಾಗಾದರೆ, ಎನ್‌ಡಿಎಯಿಂದ ಗೆದ್ದಿರುವ 19 ಸಂಸದರು ದೆಹಲಿಯ ಇಂಡಿಯಾ ಗೇಟ್ ಕಾಯಲು ಇದ್ದಾರೆಯೇ? ರಾಜ್ಯದ ಜನತೆ ಸಂಕಷ್ಟದಲ್ಲಿರುವಾಗ ಕೇಂದ್ರದ ಮುಂದೆ ಧ್ವನಿ ಎತ್ತಿ ನ್ಯಾಯ ಕೇಳುವುದು ಅವರ ಜವಾಬ್ದಾರಿಯಲ್ಲವೇ? ನಾವು ಕಾಂಗ್ರೆಸ್ ಪಕ್ಷಕ್ಕಾಗಿ ಪರಿಹಾರ ಕೇಳುತ್ತಿಲ್ಲ. ಕರ್ನಾಟಕದ ಜನರಿಗಾಗಿ ಕೇಳುತ್ತಿದ್ದೇವೆ ಎಂದು ಗುಡುಗಿದರು.
ಉತ್ತರ ಕರ್ನಾಟಕಕ್ಕೆ ಬಿಜೆಪಿ ಮೋಸ :-
ಉತ್ತರ ಕರ್ನಾಟಕದ ಜನರಿಗೆ ಬಿಜೆಪಿ ಸತತವಾಗಿ ಮೋಸ ಮಾಡುತ್ತಿದೆ. ಅಲ್ಲಿನ ಜನರ ಮತ ಪಡೆದು ಗೆದ್ದ ನಾಯಕರು ಈಗ ಎಲ್ಲಿ ಅಡಗಿದ್ದಾರೆ?’ ಎಂದು ಪ್ರಶ್ನಿಸಿದ ಅವರು, ಉತ್ತರ ಕರ್ನಾಟಕದಲ್ಲಿ ಫೈರ್ ಬ್ರ್ಯಾಂಡ್‌ಗಳೆಂದು ಹೇಳಿಕೊಳ್ಳುವ ಇಲಿಗಳು, ಈಗ ರಾಜ್ಯಕ್ಕೆ ಅನ್ಯಾಯವಾದಾಗ ಕೇಂದ್ರವನ್ನು ಏಕೆ ಪ್ರಶ್ನಿಸುತ್ತಿಲ್ಲ? ಅವರಿಗೆ ರಾಜ್ಯದ ಪರವಾಗಿ ಮಾತನಾಡುವ ಯೋಗ್ಯತೆ ಇಲ್ಲವೇ? ಆರ್. ಅಶೋಕ್ ಅವರಿಗೆ ನಿಜವಾಗಿಯೂ ತಾಕತ್ತಿದ್ದರೆ, ಕೇಂದ್ರ ಸರ್ಕಾರವನ್ನು ಕೇಳಿ ರಾಜ್ಯಕ್ಕೆ ನ್ಯಾಯಯುತ ಪರಿಹಾರ ತರಲಿ ಎಂದು ಸವಾಲು ಹಾಕಿದರು.