ಮದ್ದೂರು : ರೋಲ್ ಕಾಲ್ ಮಾಡುವ ಗುರೂಜಿಗಳಿಂದ ಕಾಂಗ್ರೆಸ್ ಪಕ್ಷದ ಭವಿಷ್ಯ ನಿರ್ಧಾರವಾಗುವುದಿಲ್ಲ. ನಾಡಿನ ಜನರೇ ಅದನ್ನು ತೀರ್ಮಾನ ಮಾಡುತ್ತಾರೆ ಎಂದು ಮದ್ದೂರು ಶಾಸಕ ಕೆ.ಎಂ.ಉದಯ್ ಕದಲೂರು ಬ್ರಹ್ಮಾಂಡ ಗುರೂಜಿಗೆ ತಿರುಗೇಟು ನೀಡಿದ್ದಾರೆ.
ಮದ್ದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಗಳಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಬೇಕು ಎಂದು ರಾಜ್ಯದ ಮತದಾರರು ನಿರ್ಧರಿಸುತ್ತಾರೆ. ಕೇವಲ ಬ್ರಹ್ಮಾಂಡ ಗುರೂಜಿ ಹೇಳಿದರೆಂಬ ಒಂದು ಮಾತಿನಿಂದ ಯಾವ ಪಕ್ಷವು ಅಧಿಕಾರಕ್ಕೆ ಬರುವುದಿಲ್ಲ. ಮೇಲಾಗಿ ಕಾಂಗ್ರೆಸ್ ಪಕ್ಷ ತನ್ನದೇ ಆದ ತತ್ವ, ಸಿದ್ಧಾಂತ ಹೊಂದಿದೆ. ಅದನ್ನು ನೋಡಿ ಜನರು ಆಶೀರ್ವಾದ ಮಾಡಿಕೊಂಡು ಬರುತ್ತಿದ್ದಾರೆ. ಮುಂದೆಯೂ ಸಹ ಪಕ್ಷಕ್ಕೆ ಜನರು ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ರೋಲ್ ಕಾಲ್ ಮಾಡುವ ಬುರುಡೆ ಜ್ಯೋತಿಷ್ಯಿ..!
ಆ ಬ್ರಹ್ಮಾಂಡ ಗುರೂಜಿಯ ಹಿನ್ನೆಲೆ ಏನು ಅನ್ನೋದು ನನಗೂ ಗೊತ್ತಿದೆ. ಕೇವಲ ಟಿವಿ ಮುಂದೆ ಕುಳಿತುಕೊಂಡು ಬುರುಡೆ ಜ್ಯೋತಿಷ್ಯ ಹೇಳಿ ಮಂಕು ಬೂದಿ ಎರಚಿ ಜನರನ್ನು ಯಾಮಾರಿಸಿ ರೋಲ್ ಕಾಲ್ ಮೂಲಕ ಬದುಕು ನಡೆಸುತ್ತಿರುವ ಈತನಿಗೆ ಕಾಂಗ್ರೆಸ್ ಭವಿಷ್ಯ ಹೇಳುವ ನೈತಿಕ ಹಕ್ಕಿಲ್ಲ ಎಂದು ನೇರವಾಗಿ ಜಾಡಿಸಿದರು. ಯಾವ ಪಕ್ಷ ಅಧಿಕಾರಕ್ಕೆ ಬರಬೇಕು ಅನ್ನೋದನ್ನ ರಾಜ್ಯದ ಮತದಾರರು ನಿರ್ಧರಿಸುತ್ತಾರೆ. ಆ ರೋಲ್ ಕಾಲ್ ಬ್ರಹ್ಮಾಂಡ ಗುರೂಜಿಯಲ್ಲ ಎಂದು ಕಿಡಿಕಾರಿದರು.