ಬೆಂಗಳೂರು : ರಾಜ್ಯದಲ್ಲಿ ನವೆಂಬರ್ ಕ್ರಾಂತಿ ಮತ್ತು ಸಂಪುಟ ಪುನರ್ ರಚನೆ ಚರ್ಚೆಯ ಮುನ್ನೆಲೆಗೆ ಬಂದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಸೋಮವಾರ ರಾತ್ರಿ ಡಿನ್ನರ್ ಮೀಟಿಂಗ್ ಹಮ್ಮಿಕೊಂಡಿರುವುದು ಇನ್ನಷ್ಟು ಚರ್ಚೆಗೆ ಗ್ರಾಸವಾಗಿದೆ.
ಸಿಎಂ ಸಿದ್ದರಾಮಯ್ಯ ಸಚಿವರಿಗೆ ಔತಣಕೂಟ ಹಮ್ಮಿಕೊಂಡಿರುವುದು ಇದೀಗ ರಾಜ್ಯ ರಾಜಕಾರಣದಲ್ಲಿ ನಾನಾ ಆಯಾಮದಲ್ಲಿ ಚರ್ಚೆಗಳು ನಡೆಯುತ್ತಿವೆ. ಇದು ಔತಣಕೂಟವೋ ಅಥವಾ ಬೀಳ್ಕೊಡುಗೆ ಪಾರ್ಟಿಯೋ ? ಎಂಬ ಪ್ರಶ್ನೆಗಳನ್ನ ರಾಜಕೀಯ ವಿಶ್ಲೇಷಕರು ಕೇಳುತ್ತಿದ್ದಾರೆ. ಆದ್ರೆ ಔತಣಕೂಟಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯ ಇಲ್ಲ ಎಂದು ಸಿಎಂ, ಡಿಸಿಎಂ ಆದಿಯಾಗಿ ಎಲ್ಲಾ ಕಾಂಗ್ರೆಸ್ ನಾಯಕರೂ ಹೇಳುತ್ತಿದ್ದಾರೆ. ಆದ್ರೆ, ಇತ್ತೀಚಿನ ಬೆಳವಣಿಗೆಗಳಂತೂ ವಿಷಕ್ಷ ನಾಯಕರ ಹೇಳಿಕೆ ಪುಷ್ಟಿ ನೀಡುವಂತಿವೆ.
ಸೋಮವಾರ ಹಮ್ಮಿಕೊಂಡಿರುವ ಡಿನ್ನರ್ ಪಾರ್ಟಿಯ ಉದ್ದೇಶ ಏನು ಎಂಬುವುದು ಸದ್ಯಕ್ಕೆ ಉದ್ಭವಿಸಿರುವ ಪ್ರಶ್ನೆ, ಸಚಿವ ಸಂಪುಟ ಸಭೆಯಲ್ಲೇ ಸಿಎಂ ಸಿದ್ದರಾಮಯ್ಯ ಅವರು ಸಚಿವರಿಗೆ ಔತಣಕೂಟಕ್ಕೆ ಬರುವಂತೆ ಆಹ್ವಾನ ನೀಡಿದ್ದರು. ಈ ಸಂದರ್ಭದಲ್ಲಿ ಔತಣಕೂಟದ ವಿಶೇಷತೆ ಏನು ಎಂದು ಕೆಲವು ಸಚಿವರು ಪ್ರಶ್ನಿಸಿದ್ದರಂತೆ. ಅದಕ್ಕೆ ಉತ್ತರಿಸಿದ್ದ ಸಿಎಂ ಸರ್ಕಾರಕ್ಕೆ ಎರಡುವರೆ ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಔತಣಕೂಟವನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ವಿಶೇಷತೆ ಏನೂ ಇಲ್ಲ. ಒಟ್ಟಿಗೆ ಕುಳಿತುಕೊಂಡು ಊಟ ಮಾಡಿಕೊಂಡು ಮಾತುಕತೆ ನಡೆಸೋಣ ಎಂದು ಸಿಎಂ ಸಮಜಾಯಷಿ ಹೇಳಿದ್ದರಂತೆ. ಸದ್ಯ 12 ಕ್ಕೂ ಅಧಿಕ ಸಚಿವರನ್ನು ಬದಲಾವಣೆ ಮಾಡಲಾಗುವ ಸಾಧ್ಯತೆ ಇದೆ. ಹಾಗಾಗಿ ಸಿಎಂ ಸಿದ್ದರಾಮಯ್ಯ ಅವರು ಸಂಪುಟ ಸದಸ್ಯರಿಗೆ ಔತಣಕೂಟ ಆಯೋಜನೆ ಮಾಡುವ ಮೂಲಕ ವಿದಾಯ ಹೇಳುತ್ತಿದ್ದಾರೆ ಎಂಬುವುದು ಮತ್ತೊಂದು ವಾದವಾಗಿದೆ. ಇನ್ನೊಂದು ವಾದ ಇದು ನವೆಂಬರ್ ಕ್ರಾಂತಿಯ ಮುನ್ಸೂಚನೆ ಅನ್ನೋದು. ಅದೇನೆ ಇರ್ಲಿ ಬಿಹಾರ ಚುನಾವಣೆ ನಂತರ ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಆಗುವುದಂತೂ ಸತ್ಯ ಎಂಬುದು ರಾಜಕೀಯ ವಿಶ್ಲೇಷಕರ ಮಾತು.