‘ಅಕ್ಕನ ಸ್ಥಾನದಲ್ಲಿ ನಿಂತು ಪ್ರದೀಪ್ ಈಶ್ವರ್- ಪ್ರತಾಪ್ ಸಿಂಹಗೆ ಕಿವಿಮಾತು ಹೇಳ್ತೀನಿ’

ಉಡುಪಿ : ಅಕ್ಕನ ಸ್ಥಾನದಲ್ಲಿ ನಿಂತು ಶಾಸಕ ಪ್ರದೀಪ್ ಈಶ್ವರ್ ಹಾಗೂ ಮಾಜಿ ಸಂಸದ ಪ್ರತಾಪ್‌ ಸಿಂಹ ಇಬ್ಬರಿಗೂ ಒಂದು ಕಿವಿಮಾತು ಹೇಳುತ್ತೇನೆ. ನನ್ನ ವಿಚಾರದಲ್ಲೂ ಬಹಳಷ್ಟು ಅಪಮಾನಗಳನ್ನು ಅನುಭವಿಸಿದ್ದೇನೆ. ರಾಜಕಾರಣಿಗಳನ್ನು ಜನ ಗಮನಿಸುತ್ತಿದ್ದಾರೆ. ನಾವು ರೋಲ್ ಮಾಡೆಲ್ ಆಗಬೇಕೆ ಹೊರತು ನಾಚಿಕೆ ಆಗುವಂತೆ ವರ್ತಿಸಬಾರದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಿವಿಮಾತು ಹೇಳಿದ್ದಾರೆ.

ನಗರದಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಸಮಾರಂಭದ ಬಳಿಕ ಮಾತನಾಡಿ, ನಿಮ್ಮ ಆಚಾರ ವಿಚಾರ ಭಾಷೆಯನ್ನು ಜನರು ನೋಡುತ್ತಾರೆ. ನಿಮ್ಮ ಜಗಳದ ನಡುವೆ ನಿಮ್ಮ ತಂದೆ ತಾಯಿಯರನ್ನು ಎಳೆದು ತರುವುದು. ಸರಿಯಲ್ಲ, ಇದನ್ನ ಇಲ್ಲಿಗೇ ಬಿಟ್ಟುಬಿಡಿ. ಇಬ್ಬರೂ ಬುದ್ಧಿವಂತರಿದ್ದೀರಿ, ಸಾಕು ಇಲ್ಲಿಗೇ ಬಿಟ್ಟುಬಿಡಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸಲಹೆ ನೀಡಿದರು.

ಇನ್ನು ಮುಂದುವರೆದು ನಾತನಾಡಿದ ಅವರು, ನಾನು ಕಾಂಗ್ರೆಸ್ ಸಾಮಾನ್ಯ ಕಾರ್ಯಕರ್ತೆ, ನವೆಂಬರ್ ತಿಂಗಳ ಕ್ರಾಂತಿ, ಶಾಂತಿ ಎಲ್ಲವೂ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಮುಖ್ಯಮಂತ್ರಿ ಬದಲಾವಣೆ ಎಐಸಿಸಿ ಅಧ್ಯಕ್ಷರಿಗೆ ಬಿಟ್ಟ ವಿಚಾರ. ನಾನು ಸೇರಿದಂತೆ ಎಲ್ಲರೂ ಪಕ್ಷ ಹೇಳಿದಂತೆ ಕೇಳುತ್ತೇವೆ‌. ಪಕ್ಷ ನನ್ನನ್ನು ಗುರುತಿಸಿ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದೆ. ನಿಮ್ಮ ಕೆಲಸ ಬೇರೆ ಇದೆ ಎಂದು ಪಕ್ಷ ಸೂಚಿಸಿದರೂ ಸಂತೋಷದಿಂದ ಕೇಳುತ್ತೇವೆ ಎಂದರು.‌ ಮೇಲಾಗಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೈಕಮಾಂಡ್ ಮಾತಿನಂತೆ ನಡೆದುಕೊಳ್ಳುವ ವ್ಯಕ್ತಿ. ಸೋನಿಯಾ ಗಾಂಧಿ ಅವರ ತ್ಯಾಗದ ಮಾತನ್ನು ಬಹಳಷ್ಟು ಸಾರಿ ಹೇಳಿದ್ದಾರೆ. ಇದಕ್ಕೆ ವಿಶೇಷ ಅರ್ಥವನ್ನು ಕಲ್ಪಿಸುವುದು ಬೇಡ. ಗಾಂಧಿ ಪರಿವಾರದ ಇಂದಿರಾಗಾಂಧಿ, ರಾಜೀವ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರ ಇತಿಹಾಸದ ಬಗ್ಗೆ ನಮಗೆಲ್ಲ ಗೊತ್ತಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.‌

ಕರ್ನಾಟಕ ರಾಜ್ಯೋತ್ಸವ ದಿನ ಬಹಳ ಪವಿತ್ರವಾದದ್ದು. ಪ್ರತ್ಯೇಕ ಧ್ವಜ ಹಾರಿಸಿದವರಿಗೆ ನಾನು ಬೆಂಬಲ ಮಾಡಲ್ಲ. ಕರ್ನಾಟಕದ ಏಕೀಕರಣಕ್ಕೆ ಹಿರಿಯರು, ಸಾಹಿತಿಗಳು ಹೋರಾಟ ಮಾಡಿದ್ದಾರೆ. ಈ ಸುಸಂದರ್ಭದಲ್ಲಿ ಈ ಬೆಳವಣಿಗೆಗಳ ಬಗ್ಗೆ ನಾನು ಮಾತಾಡಲ್ಲ. ಈ ಬೆಳವಣಿಗೆ ಬಗ್ಗೆ ಮುಂದಿನ ದಿನಗಳಲ್ಲಿ ಮಾತನಾಡುತ್ತೇನೆ ಎಂದರು.

Leave a Reply

Your email address will not be published. Required fields are marked *