ಮಂಡ್ಯ : ಜನರನ್ನ ಮರುಳು ಮಾಡುವುದರಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ನಿಸ್ಸೀಮರು. ಅವರು ಸಂದರ್ಭಕ್ಕೆ ತಕ್ಕಂತೆ ಸುಳ್ಳು ಹೇಳಿಕೊಂಡು ಜವಾಬ್ದಾರಿಯಿಂದ ಜಾರಿಕೊಳ್ಳುವುದನ್ನು ಕರಗತ ಮಾಡಿಕೊಂಡಿದ್ದಾರೆ. ಕೇಂದ್ರ ಸಚಿವರಾದ ಒಂದೂವರೆ ವರ್ಷದಲ್ಲಿ ಒಂದೇ ಒಂದು ರುಪಾಯಿಯೂ ಉಪಯೋಗ ರಾಜ್ಯಕ್ಕೆ ಕುಮಾರಸ್ವಾಮಿಯಿಂದ ಆಗಿಲ್ಲ ಎಂದು ಕುಟುಕಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರು ತಿಂಗಳೋ, ವರ್ಷಕ್ಕೋ ಒಮ್ಮೆ ರಾಜ್ಯಕ್ಕೆ ಬರುತ್ತಾರೆ. ಏನೋ ತೊಂದರೆಯಾಗಿದೆ ಎಂದು ತೋರಿಸಿಕೊಳ್ಳುತ್ತಾರೆ. ಮತ ಕೊಟ್ಟ ಕ್ಷೇತ್ರದ ಅಭಿವೃದ್ಧಿಗೆ ಏನಾದರೂ ಕೊಡುಗೆ ನೀಡಬೇಕೆಂಬ ಬದ್ಧತೆ, ಇಚ್ಛಾಶಕ್ತಿ ಇಲ್ಲ. ಕೈಗಾರಿಕೆಗಳ ಸ್ಥಾಪನೆಗೆ ರಾಜ್ಯ ಸರ್ಕಾರ ಅಸಹಕಾರ ತೋರುತ್ತಿದೆ ಎಂಬ ಹಳೇ ರಾಗವನ್ನು ಹಾಡಿ ಪಲಾಯನ ಮಾಡುತ್ತಿದ್ದಾರೆ. ಜನರು ಕೆಲಸ ಮಾಡುವವರನ್ನ್ನು ಬಿಟ್ಟು, ಅಂತಹವರನ್ನೇ ಇಷ್ಟಪಡುತ್ತಾರೆ. ಏನು ಮಾಡೋಕಾಗುತ್ತೆ ಎಂದು ಪ್ರಶ್ನಿಸಿದರು. ಸಂಸದರ ಅನುದಾನ ಎಲ್ಲರಿಗೂ ಬಂದೇ ಬರುತ್ತದೆ. ಅದನ್ನೇ ದೊಡ್ಡ ಸಾಧನೆ ಎಂದು ಬಿಂಬಿಸಿಕೊಳ್ಳುವುದು ದೊಡ್ಡಸ್ತಿಕೆಯಲ್ಲ. ವಿಶೇಷ ಅನುದಾನ ತಂದಿದ್ದರೆ ಅದನ್ನು ಸಾಧನೆ ಎನ್ನಬಹುದು. ಯಾವುದಾದರೊಂದು ಕಾರ್ಖಾನೆಯನ್ನೋ, ಕೈಗಾರಿಕೆಯನ್ನೋ ತಂದು ಉದ್ಯೋಗ ಸೃಷ್ಟಿಸಿರುವ ಬಗ್ಗೆ ಎಚ್‌ಡಿಕೆ ಪಟ್ಟಿ ಬಿಡುಗಡೆ ಮಾಡಲಿ. ಕೇಂದ್ರ ಸಚಿವರಾದವರು ಸಿಎಸ್‌ಆರ್ ಫಂಡ್ ತಂದಿದ್ದನ್ನು ಅವರ ಮಟ್ಟಕ್ಕೆ ಬಿಂಬಿಸಿಕೊಳ್ಳುವುದು ಯೋಗ್ಯತೆಯಲ್ಲ ಎಂದು ಕಟುವಾಗಿ ಹೇಳಿದರು.
ಮಂಡ್ಯದಲ್ಲಿ ಹಾದುಹೋಗಿರುವ ಬೆಂಗಳೂರು- ಮೈಸೂರು ಹೆದ್ದಾರಿ ಸಮಸ್ಯೆಗಳನ್ನು ಬಗೆಹರಿಸಲು ಕುಮಾರಸ್ವಾಮಿ ಅವರಿಂದ ಸಾಧ್ಯವಾಗುತ್ತಿಲ್ಲ. ಪ್ರಧಾನಿ ಬಳಿ ಕುಳಿತು ರಾಜ್ಯದ ಸಮಸ್ಯೆಗಳನ್ನು ವಿವರಿಸಿ ಬಗೆಹರಿಸಲು ಪ್ರಯತ್ನಿಸಬೇಕು. ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಯಾವತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕುಮಾರಸ್ವಾಮಿ ಭೇಟಿಯಾಗಿದ್ದಾರೆ.? ರಾಜ್ಯದ ಅಭಿವೃದ್ಧಿ ಬಗ್ಗೆ ಯಾವುದಾದರೂ ಒಂದು ಪತ್ರ ಬರೆದಿದ್ದಾರ? ರಾಜ್ಯದ ಕೈಗಾರಿಕಾ ಸಚಿವರನ್ನು ಭೇಟಿಯಾಗಿದ್ದಾರ? ಎಂದು ಪ್ರಶ್ನೆಗಳ ಸುರಿಮಳೆಗರೆದರು.