ಬಾಗಲಕೋಟೆ : ಸಚಿವ ಸತೀಶ್ ಜಾರಕಿಹೊಳಿ ಅವರೇ ನಮ್ಮ ಮುಂದಿನ ಮುಖ್ಯಮಂತ್ರಿ, ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ತಿಮ್ಮಾಪೂರ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಮುಧೋಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಮುಖ್ಯಮಂತ್ರಿ ಸತೀಶ್ ಜಾರಕಿಹೊಳಿ ಅವರು ಸಿಎಂ ಆಗೋದನ್ನ ಯಾರೂ ತಪ್ಪಿಸಲು ಸಾಧ್ಯವಿಲ್ಲ. ಸತೀಶ್ ಜಾರಕಿಹೊಳಿ ಯಾರದೋ ಕೃಪೆಯಿಂದ ಮುಖ್ಯಮಂತ್ರಿ ಆಗುವುದಲ್ಲ, ಅವರ ಸ್ವಂತ ಶಕ್ತಿಯಿಂದ ಮುಖ್ಯಮಂತ್ರಿ ಆಗುತ್ತಾರೆ. ಅಭಿವೃದ್ಧಿ ಕಾರ್ಯಗಳ ಮೂಲಕ ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಆಗುತ್ತಾರೆ. ಸತೀಶ್ ಜಾರಕಿಹೊಳಿ ಒಂದಲ್ಲ ಒಂದು ದಿನ ಈ ನಾಡಿನ ಮುಖ್ಯಮಂತ್ರಿ ಆಗುತ್ತಾರೆ ಎಂದರು.
2028ಕ್ಕೆ ಬೇಡ ಈಗಲೇ ಸಿಎಂ ಆಗು..!
ಇನ್ನು ಇದಕ್ಕೂ ಮುನ್ನ ಮಾತನಾಡಿದ ಬಿಜೆಪಿ ಶಾಸಕ ರಾಜುಗೌಡ, ಸತೀಶ್ ಜಾರಕಿಹೊಳಿಯನ್ನು ಹಾಡಿ ಹೊಗಳಿದರು. ನವೆಂಬರ್, ಡಿಸೆಂಬರ್ ಒಳಗೆ ಸತೀಶ್ ಜಾರಕಿಹೊಳಿ ಅಣ್ಣ ಮುಖ್ಯಮಂತ್ರಿ ಆಗಬೇಕು ಎಂದರು. ಅಲ್ಲದೇ ಸತೀಶ್ ಜಾರಕಿಹೊಳಿಯನ್ನ ಸ್ವತಂತ್ರ ವೀರ ಯೋಧ ಜಡಗಣ್ಣ ಬಾಲಣ್ಣಗೆ ಹೋಲಿಸಿದರು. ಇನ್ನು ಸತೀಶ್ ಜಾರಕಿಹೊಳಿ ಶಸ್ತ್ರತ್ಯಾಗ ಮಾಡಬಾರದು. ಈ ಬಾರಿ ನಾನು ಮುಖ್ಯಮಂತ್ರಿ ಅಭಿಲಾಷೆ ಇಲ್ಲ, ಮುಂದಿನಸಾರಿ ಎಂದು ಜಾರಕಿಹೊಳಿ ಹೇಳುತ್ತಿದ್ದಾರೆ. ಅವೆಲ್ಲಾ ಬೇಡ ಇದೇ ಡಿಸೆಂಬರ್‌ನಲ್ಲಿ ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಆಗಬೇಕು. 2028ರ ವರೆಗೆ ಕಾಯೋಕೆ ಆಗಲ್ಲ, ಇದೇ ನವೆಂಬರ್ ನಲ್ಲಿ ಸಿಎಂ ಆಗು, ಕಾರಣ 2028ರಲ್ಲಿ ಬಿಜೆಪಿ ಅದಿಕಾರಕ್ಕೆ ಬರಲಿದೆ. ಹೀಗಾಗಿ ನೀವೂ ಈಗ ಮುಖ್ಯಮಂತ್ರಿ ಆದರೆ ನಿಮ್ಮ ಆಸೆ ಈಡೇರುತ್ತದೆ ಎಂದು ರಾಜುಗೌಡ ಹೇಳಿದರು.